ನ್ಯೂಸ್

ಕ್ಯಾನ್ಸರ್ ಪೀಡಿತ ನೌಕರನ ಚಿಕಿತ್ಸೆಗೆ ನೆರವು

ಕೆ.ಎಂ.ದೊಡ್ಡಿ: ಭಾರತೀ ಶಿಕ್ಷಣ ಸಂಸ್ಥೆಗಳ ಯಾವುದೇ ನೌಕರರು ತೀವ್ರ ಅನಾರೋಗ್ಯಕ್ಕೆ ತುತ್ತಾದಲ್ಲಿ ಅವರ ಚಿಕಿತ್ಸೆಗೆ ನೆರವು ನೀಡಲು ಭಾರತೀ ಶಿಕ್ಷಣ ಸಂಸ್ಥೆ ನೌಕರರ ಕಲ್ಯಾಣ ನಿಧಿ ಸ್ಥಾಪನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಭಾರತೀ ವಿದ್ಯಾ ಸಂಸ್ಥೆಯ ಚೇರ್ಮನ್ ಮಧು ಜಿ.ಮಾದೇಗೌಡ ಹೇಳಿದರು.

ಸಂಸ್ಥೆಯ ನೌಕರನಾಗಿರುವ ಭಾರತೀ ವಿದ್ಯಾಸಂಸ್ಥೆಯಲ್ಲಿ ಸ್ವೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಗಳ್ಳಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆತನ ಶಸ್ತ್ರಚಿಕಿತ್ಸೆಗೆ ನೌಕರರ ಕಲ್ಯಾಣ ನಿಧಿಯಿಂದ 3 ಲಕ್ಷ ರೂ. ಆರ್ಥಿಕ ನೆರವು ನೀಡಿ ಮಾತನಾಡಿದರು. ಪ್ರತಿ ತಿಂಗಳು ನೌಕರರ ಸಂಬಳದಿಂದ 45 ಸಾವಿರ ರೂ. ಮತ್ತು ಸಂಸ್ಥೆಯಿಂದ 25 ಸಾವಿರ ರೂ.ಗಳನ್ನು ನೌಕರರ ಕಲ್ಯಾಣ ನಿಧಿಗೆ ಮೀಸಲಿಡಲಾಗುತ್ತದೆ. ಕಳೆದ 6 ತಿಂಗಳ ಹಿಂದೆ ನೌಕರರ ನಿಧಿ ಸ್ಥಾಪಿಸಿದ್ದು ಮಾರಣಾಂತಿಕ ಕಾಯಿಲೆಗೆ ತುತ್ತಾದವರಿಗೆ 5 ರಿಂದ 6 ಲಕ್ಷ ರೂ. ಚಿಕಿತ್ಸಾ ವೆಚ್ಚ ನೀಡಲಾಗುವುದು ಎಂದು ತಿಳಿಸಿದರು.

ಭಾರತೀ ವಿದ್ಯಾ ಸಂಸ್ಥೆಯು ಸದ್ದಿಲ್ಲದೆ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ನನ್ನ ತಂದೆ ಜಿ.ಮಾದೇಗೌಡರ ಆಶಯದಂತೆ ಸಂಸ್ಥೆಯ ನೌಕಕರಿಗೆ ಸದಾ ನೆರವಾಗುತ್ತಿದ್ದು ನೌಕರರ ಕಲ್ಯಾಣ ನಿಧಿ ಸ್ಥಾಪನೆಯಿಂದ ನೌಕರರ ಕುಟುಂಬಕ್ಕೆ ಸಹಾಯವಾಗಲಿದೆ ಎಂದರು.

ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ಡಾ.ತಮೀಜ್‌ಮಣಿ, ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ಆಡಳಿತಾಧಿಕಾರಿ ಪ್ರೊ.ಎಸ್.ಜವರೇಗೌಡ, ಭಾರತೀ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಿ. ಕೃಷ್ಣ ಮತ್ತಿತರಿದ್ದರು.