ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವವು ಸೋಮವಾರ ವಿಶ್ವವಿದ್ಯಾಲಯ ಆವರಣದಲ್ಲಿ ನೆರವೇರಿತು.
ಸಂಸ್ಥೆಯ ವಿವಿಧ ನಿಕಾಯಗಳಲ್ಲಿ ಪದವಿ, ಡಿಪ್ಲೊಮಾ ಪಡೆದ 1,678 ವಿದ್ಯಾರ್ಥಿಗಳಲ್ಲಿ 922 ವಿದ್ಯಾರ್ಥಿಗಳಿಗೆ ಬಿ.ಇ., 51 ವಿದ್ಯಾರ್ಥಿಗಳಿಗೆ ಬಿಸಿಎ., 90 ವಿದ್ಯಾರ್ಥಿಗಳಿಗೆ ಎಂ.ಟೆಕ್, 140 ವಿದ್ಯಾರ್ಥಿಗಳಿಗೆ ಎಂ.ಎಸ್ಸಿ., 282 ವಿದ್ಯಾರ್ಥಿಗಳಿಗೆ ಎಂಬಿಎ, 9 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಡಿದರು.
ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿ ರ‌್ಯಾಂಕ್ ಗಳಿಸಿದ 148 ವಿದ್ಯಾರ್ಥಿಗಳಿಗಳಲ್ಲಿ 64 ಜನರಿಗೆ ಪದಕ ಪ್ರದಾನ ಮಾಡಲಾಯಿತು. ಇವುಗಳಲ್ಲಿ 30 ಚಿನ್ನ ಹಾಗೂ 34 ದತ್ತಿ ಪದಕಗಳೂ ಇದ್ದವು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಘಟಿಕೋತ್ಸವ ಭಾಷಣ ಮಾಡಿದರು. ವಿದ್ಯಾರ್ಥಿಗಳು ಸಂಶೋಧನೆ, ಆವಿಷ್ಕಾರಗಳ ಜತೆಗೆ ಉದ್ಯಮಶೀಲತೆ ಬೆಳೆಸಿಕೊಂಡು ನವೋದ್ಯಮಿಗಳಾಗಬೇಕು. ತರಗತಿಗಳಲ್ಲಿ ಓದುವುದಕ್ಕೂ ಕೈಗಾರಿಕೋದ್ಯಮಗಳಲ್ಲಿ ಎದುರಾಗುವ ಸವಾಲುಗಳಿಗೂ ಬಹಳ ವ್ಯತ್ಯಾಸವಿದೆ. ಕೌಶಲಗಳನ್ನು ಉನ್ನತೀಕರಿಸಿಕೊಳ್ಳಲು ನಿರಂತರವಾಗಿ ಶ್ರಮಿಸಬೇಕು ಎಂದು ಡಾ.ಶಾಲಿನಿ ರಜನೀಶ್ ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ದತ್ತಾಂಶ ವಿಜ್ಞಾನ, ಕ್ವಾಂಟಂ ಕಂಪ್ಯೂಟಿಂಗ್ ಯುಗದಲ್ಲಿದ್ದೇವೆ. ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಂತರ ವೇಗವಾಗಿದೆ ನಡೆದಿದೆ. ಯುವ ತಂತ್ರಜ್ಞರು ಉದ್ಯೋಗ ಭದ್ರತೆಯ ಜತೆಗೆ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ನಡೆಸಬೇಕು. ನಾಯಕತ್ವ ಗುಣ ಬೆಳೆಸಿಕೊಂಡು ನವೋದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಿದರೆ, ದೇಶವನ್ನು ಸದೃಢ ಆರ್ಥಿಕ ಶಕ್ತಿಯಾಗಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟ್‌ಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಸುರೇಶ್, ಕುಲಪತಿ ಪ್ರೊ.ಎ.ಎನ್.ಸಂತೋಷ್ ಕುಮಾರ್, ಪರೀಕ್ಷಾ ನಿಯಂತ್ರಣಾಧಾಕಾರಿ ಪಿ.ನಂಜುಂಡಸ್ವಾಮಿ, ಕುಲಸಚಿವ ಎಸ್.ಎ.ಧನರಾಜ್ ಇತರರಿದ್ದರು.