ಆಯನೂರು: ನಮ್ಮ ಮನೆಗಳಿಂದಲೇ ಸಂಸ್ಕೃತಿ ಬೆಳೆಯುತ್ತದೆ. ಭಾರತೀಯ ಸಂಸ್ಕೃತಿಯ ಶಕ್ತಿ ಅಡಗಿರುವುದೇ ಕೌಟುಂಬಿಕ ಮೌಲ್ಯಗಳಲ್ಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಚಾರಕ ವೀರೇಶ್ ಹೇಳಿದರು.
ಶನಿವಾರ ಆಯನೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಹಮ್ಮಿಕೊಂಡಿದ್ದ ವಿಜಯದಶಮಿ ಪಥ ಸಂಚಲನ ಬೌದ್ಧಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಮಾತೆಯ ರಕ್ಷಣೆಗಾಗಿ ನಾವೆಲ್ಲ ಸಿದ್ದರಿದ್ದೇವೆ ಎಂದು ಸಮಾಜಕ್ಕೆ ತೋರಿಸಲು ಸಂಘದ ಸ್ವಯಂ ಸೇವಕರು ಗಣವೇಷ ಧಾರಿಗಳಾಗಿ 25ರಂದು ದೇಶದೆಲ್ಲೆಡೆ ಪಥ ಸಂಚಲನ ನಡೆಸಲಿದ್ದಾರೆ.ಹಿಂದುಗಳನ್ನು ಒಗ್ಗೂಡಿಸುವ ಉದ್ದೇಶದಿಂದ 1925ರಲ್ಲಿ ವಿಜಯದಶಮಿ ದಿನದಂದು ಸಂಘ ಆರಂಭಿಸಲಾಯಿತು. ದೇಶ ರಕ್ಷಣೆ ಹಾಗೂ ಸಂಸ್ಕೃತಿ ಉಳಿಸಬೇಕೆಂದು ಸಣ್ಣ ಮಕ್ಕಳಿಗೆ ಆಟಗಳನ್ನು ಆಡಿಸಿಕೊಂಡು ದೇಶದ ಬಗ್ಗೆ ಸ್ವಾಭಿಮಾನ ಮೂಡಿಸಲು ಸಂಘ ಆರಂಭಿಸಿದರು.
ಜಾತಿ, ಮತ ಪಂಥ, ಶ್ರೀಮಂತ ಬಡವ ಎಂಬ ಭೇದ ತೊರೆದು ರಾಷ್ಟ್ರ ಸಂಸ್ಕೃತಿಗೆ ಒಟ್ಟಾಗಬೇಕು ಎಂಬ ಉದ್ದೇಶದಿಂದ ಸಂಘ ಪಥ ಸಂಚಲನ ನಡೆಸುತ್ತಿದೆ.
18 ರಿಂದ 28 ವರ್ಷದೊಳಗಿನ ಯುವಕರನ್ನು ಸೇರಿಸಿ ಯುವ ಸಮಾವೇಶ ಮಾಡುವ ಉದ್ದೇಶವಿದೆ. ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದನ್ನು ತಪ್ಪಿಸಿ ಅವರನ್ನು ಒಳ್ಳೆಯ ದಾರಿಯಲ್ಲಿ ನಡೆಸಬೇಕು. ತಂದೆ ತಾಯಿ, ಗುರು-ಹಿರಿಯರಿಗೆ ಗೌರವಿಸಬೇಕು. ರಾಷ್ಟ್ರ ಧರ್ಮ ಪಾಲಿಸಬೇಕು ಎಂದರು.
ನಮ್ಮ ದಾರಿ, ಸಿದ್ಧಾಂತ ಹಾಗೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಕೌಟುಂಬಿಕ ಮೌಲ್ಯಗಳು ಕಡಿಮೆ ಆಗುತ್ತಿವೆ. ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕು. ದೇಶಿ ಉಡುಗೆ ತೊಡುಗೆ ಬಳಸುವಂತಾಗಬೇಕು. ಸ್ವಭಾಷೆ ಮಾತೃ ಭಾಷೆ ಬಳಸಬೇಕು. ಪರಿಸರ ಸ್ವಚ್ಛತೆಗೆೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರು. ಪಥ ಸಂಚಲನದಲ್ಲಿ ತಾಲೂಕು ಸಂಘಚಾಲಕ ಮಂಜುನಾಥ ಶೆಟ್ಟಿ, ಎ.ವಿ. ಮಂಜುನಾಥ, ದುರ್ಗಾಪ್ರಸಾದ್, ತಮ್ಮಡಿಹಳ್ಳಿ ನಾಗರಾಜ್, ಸಿಂಗ್ನಳ್ಳಿ ಸುರೇಶ್, ಕುಪೇಂದ್ರ, ಪ್ರದೀಪ್ ಮಠದ ಇತರರಿದ್ದರು.