ನ್ಯೂಸ್

ಕೋವಿಡ್ ರೋಗಿಗಳ ದೇಹದಿಂದ ಹೊರಹೊಮ್ಮುವ ತುಂತುರು ಹನಿ ತಾಗಿದರೆ ಸೋಂಕು ಹರಡುತ್ತದೆ

ಬೆಂಗಳೂರು: ಕರೊನಾ ವೈರಸ್ ಸೋಂಕು ರೋಗ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ವ್ಯಕ್ತಿಗಳಿಂದ ಸಹ ಹರಡುವ ಸಾಧ್ಯತೆ ಇದ್ದು, ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರ ಹೊಮ್ಮುವ ತುಂತುರು ಹನಿಗಳ 5 ಮೈಕ್ರಾನ್‌ಗಿಂತ ಕಡಿಮೆ ಇದ್ದರೆ ಅದು 6 ಅಡಿಗಿಂತ ದೂರ ಗಾಳಿಯಲ್ಲಿ ತೇಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರೆಸ್ ಇನ್ಫರ್ಮೇಷನ್ ಬ್ಯುರೊ (ಪಿಐಬಿ) ಬೆಂಗಳೂರು ಕೇಂದ್ರ ಗುರುವಾರ ಆಯೋಜಿಸಿದ ಕರೊನಾ ಸೋಂಕು: ಮುನ್ನೆಚ್ಚರಿಕೆಯೇ ಚಿಕಿತ್ಸೆ ವಿಷಯ ಕುರಿತ ವೆಬಿನಾರ್‌ನಲ್ಲಿ ಆರೋಗ್ಯ ಕ್ಷೇತ್ರದ ಹಲವು ತಜ್ಞರು ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ಮಾತನಾಡಿ, ಲಕ್ಷಣ ರಹಿತ ಹಾಗೂ ಲಕ್ಷಣ ಹೊಂದಿರುವ ವ್ಯಕ್ತಿಯ ಮೂಗು, ಗಂಟಲು ಮತ್ತು ಶ್ವಾಸಕೋಶದಲ್ಲಿ ಸೋಂಕು ಇರುತ್ತದೆ. ಈ ರೀತಿಯ ವ್ಯಕ್ತಿಗಳು ಕೆಮ್ಮಿದಾಗ ಮತ್ತು ಸೀನಿದಾಗ 5 ಮೈಕ್ರಾನ್‌ಗಿಂತ ಸಣ್ಣ ಕಣಗಳು ಗಾಳಿಯಲ್ಲಿ ಹರಡಿಕೊಳ್ಳಲಿವೆ. ಆ ಕಣಗಳು ಉಸಿರಾಟದ ಮೂಲಕ ಆರೋಗ್ಯವಂತ ವ್ಯಕ್ತಿ ದೇಹ ಸೇರಿ ಅವರಿಗೂ ಸೋಂಕು ಹರಡುತ್ತದೆ. ಹಾಗಾಗಿ ಇದರಿಂದ ಪಾರಾಗಲು ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

ಸೋಂಕಿತ ವ್ಯಕ್ತಿ ಕೆಮ್ಮುವುದರಿಂದ, ಸೀನುವುದರಿಂದ ಹೊರಹೊಮ್ಮುವ ಕಣಗಳು ನೆಲ, ವಸ್ತುಗಳು ಸೇರಿದಂತೆ ವಿವಿಧೆಡೆ ಬಿದ್ದಿರುವ ಕಣಗಳನ್ನು ಸ್ಪರ್ಷಿಸಿ, ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟಿಕೊಂಡಾಗಲೂ ಸೋಂಕು ಹರಡುತ್ತದೆ. ಆದ್ದರಿಂದ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಕೈಗಳನ್ನು ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ರಾಜ್ಯ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯದ ಸಹ ಪ್ರಧಾನ ಸಂಶೋಧನಾಧಿಕಾರಿ ಡಾ. ಎಂ.ಎಸ್. ಸತ್ಯನಾರಾಯಣ ಮಾತನಾಡಿ, ಶೀತ, ಜ್ವರ, ಕೆಮ್ಮಿ, ಉಸಿರಾಟದ ಸಮಸ್ಯೆಯ ಜತೆಗೆ ತಲೆನೋವು, ಭೇದಿ, ಮೈಕೈ ನೋವು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.