ಬೆಂಗಳೂರು : ಕೋವಿಡ್ ಹಿನ್ನೆಲೆಯಲ್ಲಿ ಸೇವೆ ಸ್ಥಗಿತಗೊಳಿಸಿದ್ದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿಎಂಎಸ್‌ಎಸ್‌ವೈ) ಸೆ. 23ರಿಂದ ಸೇವೆ ಪುನಾರಂಭಿಸಿದ್ದರೂ ಕೂಡ ಕೋವಿಡ್ ಭೀತಿಯಿಂದಾಗಿ ರೋಗಿಗಳು ಆಸ್ಪತ್ರೆಯತ್ತ ಸುಳಿಯುತ್ತಿಲ್ಲ.
ನರರೋಗ, ಹೃದ್ರೋಗ, ಯಕೃತ್, ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಪೂರ್ವದಲ್ಲಿ ನಿತ್ಯ 800ಕ್ಕೂ ಹೆಚ್ಚು ಹೊರ ರೋಗಿಗಳು ತಪಾಸಣೆಗೆ ಆಗಮಿಸುತ್ತಿದ್ದರು. ಆದರೆ ಈಗ ಕೋವಿಡ್ ಭೀತಿ ಒಂದೆಡೆಯಾದರೆ, ಮತ್ತೊಂದಡೆ ಆಸ್ಪತ್ರೆ ಮರು ಆರಂಭವಾಗಿರುವ ಬಗ್ಗೆ ಮಾಹಿತಿ ಕೊರತೆಯಿಂದ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇದ್ದು, ನಿತ್ಯ 20-30 ಮಂದಿಯಷ್ಟೇ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದ್ದರಿಂದ ವಾಣಿವಿಲಾಸ, ನೆ್ರೆೆ ಯುರಾಲಜಿ ಸಂಸ್ಥೆ, ಸುಟ್ಟಗಾಯಗಳ ವಿಭಾಗ ಹೊರತುಪಡಿಸಿ ಪಿಎಂಎಸ್‌ಎಸ್‌ವೈ, ಮಿಂಟೋ, ಇಎನ್‌ಟಿ ಸೇರಿದಂತೆ ಇತರೆ ವಿಭಾಗಗಳ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಆರು ತಿಂಗಳಿಂದ ರೋಗಿಗಳು ಚಿಕಿತ್ಸೆಗೆ ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಕ್ಟೋರಿಯಾ, ಎಮರ್ಜೆನ್ಸಿ ಟ್ರಾರ್ಮಾ ಕೇರ್, ಇಎನ್‌ಟಿ ಹೊರತುಪಡಿಸಿ ಉಳಿದೆಲ್ಲ ವಿಭಾಗಗಳು ಸೇವೆ ಪುನರಾರಂಭಿಸಿವೆ.
ಆಸ್ಪತ್ರೆ ಪುನರಾರಂಭದ ಬಗ್ಗೆ ಬಹಳಷ್ಟು ರೋಗಿಗಳಿಗೆ ಮಾಹಿತಿ ಇಲ್ಲ. ಹೀಗಾಗಿ ಕಡಿಮೆ ಜನ ಬರುತ್ತಿದ್ದಾರೆ. ಸದ್ಯ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳು ಹೊರ ರೋಗಿಗಳ ವಿಭಾಗದಲ್ಲಿ ತಪಾಸಣೆ ಮಾಡಿಸಿಕೊಂಡು ಔಷಧ ಪಡೆಯಬಹುದು ಎಂದು ಆಸ್ಪತ್ರೆ ನಿರ್ದೇಶಕ ಡಾ. ಗಿರೀಶ್ ತಿಳಿಸಿದ್ದಾರೆ.
ಬಾಕ್ಸ್
ಅ.1ರಿಂದ ಮಿಂಟೋ ಪೂರ್ಣ ಸೇವೆ
ಮಿಂಟೋ ಕಣ್ಣಿನ ಆಸ್ಪತ್ರೆ ಅ.1ರಿಂದ ಎಲ್ಲ ಬಗೆಯ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಪೂರ್ಣಪ್ರಮಾಣದಲ್ಲಿ ಸೇವೆ ಪುನರಾರಂಭಿಸಲಿದೆ. ಸದ್ಯ ಕಣ್ಣಿನ ಪೊರೆ ಸೇರಿ ವಿವಿಧ ಸಂಕೀರ್ಣ ಹಾಗೂ ತುರ್ತು ಅಗತ್ಯ ಇಲ್ಲದ ಶಸ ಚಿಕಿತ್ಸೆಗಳನ್ನು ಮುಂದೂಡಿ, ಕೇವಲ ತುರ್ತು ಅಗತ್ಯತೆಗಳಿಗೆ ಮಾತ್ರ ಶಸ್ತ್ರಚಿಕಿತ್ಸೆಗಳನ್ನೂ ನಡೆಸಲಾಗುತ್ತಿದೆ.
ಅ.1ರಿಂದ ಎಲ್ಲ ರೀತಿಯ ಚಿಕಿತ್ಸೆಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಒಂದೇ ಬಾರಿ ಅಧಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಿಲ್ಲ. ಹೀಗಾಗಿ ದಿನವೊಂದಕ್ಕೆ 10ರಿಂದ 20 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ ಎಂದು ಡಾ. ಸುಜಾತಾ ರಾಥೋಡ್ ತಿಳಿಸಿದರು.