ನ್ಯೂಸ್

ಕೋಳಿ ಸಾಕಣೆ ಕೇಂದ್ರದಿಂದ ಅನೈರ್ಮಲ್ಯ

ಹನೂರು: ಸಮೀಪದ ಆರ್.ಎಸ್.ದೊಡ್ಡಿಯ ಹುಲ್ಲೇಪುರದ ಬಳಿಯಿರುವ ಕೋಳಿ ಸಾಕಣೆ ಕೇಂದ್ರದಲ್ಲಿ ತಾಂಡವವಾಡುತ್ತಿರುವ ಅನೈರ್ಮಲ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶುಕ್ತವಾರ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತರು ಶಿರಸ್ತೇದಾರ್ ಮಹದೇವನಾಯ್ಕ ಅವರಲ್ಲಿ ಮನವಿ ಸಲ್ಲಿಸಿದರು.

ರೈತ ಮುಖಂಡರು ಮಾತನಾಡಿ, ಆರ್.ಎಸ್.ದೊಡ್ಡಿಯ ಹೊರ ವಲಯದಲ್ಲಿರುವ ಕೋಳಿ ಸಾಕಣೆ ಕೇಂದ್ರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇಲ್ಲಿನ ದುರ್ವಾಸನೆ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ನೆಮ್ಮದಿಯಿಂದ ಊಟ ಮಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಅಶುಚಿತ್ವದಿಂದಾಗಿ ನೊಣಗಳು ಹೆಚ್ಚಾಗಿದ್ದು, ಜಾನುವಾರುಗಳ ರಕ್ತವನ್ನು ಹೀರುತ್ತಿವೆ. ಗಂಟುರೋಗ ಕಾಣಿಸಿಕೊಳ್ಳುತ್ತಿದೆ. ಸತ್ತ ಕೋಳಿಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಇತ್ತ ಕೇಂದ್ರದತ್ತ ಆಗಮಿಸುವ ಕಾಡುಪ್ರಾಣಿಗಳು ಜಮೀನಿಗೆ ಲಗ್ಗೆ ಇಡುತ್ತಿವೆ. ತರಕಾರಿ ಬೆಳೆಯನ್ನಂತೂ ಬೆಳೆಯುವುದಕ್ಕೆ ಆಗುತ್ತಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದು, ನೆಮ್ಮದಿಯಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ಬಗ್ಗೆ ಕಳೆದ ವರ್ಷ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಕ್ರಮದ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮವಾಗದಿರುವ ಪರಿಣಾಮ ಕೋಳಿ ಸಾಕಣೆ ಕೇಂದ್ರವು ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ರೋಗರುಜಿನಗಳ ಭೀತಿ ನಮ್ಮನ್ನು ಕಾಡುತ್ತಿದೆ.

ಆದ್ದರಿಂದ ಇನ್ನು ಮುಂದಾದರೂ ಈ ಬಗ್ಗೆ ಮುತುವರ್ಜಿ ವಹಿಸಿ ಕೇಂದ್ರಕ್ಕೆ ಭೇಟಿ ನೀಡಿ ವಾಸ್ತವತೆಯನ್ನು ಅರಿಯುವುದರ ಮೂಲಕ ಸೂಕ್ತ ಕ್ರಮಕೈಗೊಂಡು ಜನರಿಗೆ ಅನುಕೂಲ ಕಲ್ಪಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರ್‌ಐ ಶೇಷಣ್ಣ, ರೈತ ಮುಖಂಡರಾದ ವಿನೇಶ್, ದೊರೆ, ಗಣೇಶ್, ರಾಜೇಶ್‌ನಾಯ್ಡು, ಮೂರ್ತಿ, ಬಸವರಾಜು, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.