ನ್ಯೂಸ್

ಕೋಲಾರದಲ್ಲಿ ವಿಧಾನ ಪರಿಷತ್ ಭರವಸೆಗಳ ಸಮಿತಿ ಸಭೆ/ಕೋಲಾರಕ್ಕೆ ಎತ್ತಿನಹೊಳೆ ೨.೮ ಟಿಎಂಸಿ ನೀರು ಅಗತ್ಯ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ/ಅಕ್ಟೋಬರ್ ೨೦೨೭ರ ವೇಳೆಗೆ ಕೋಲಾರಕ್ಕೆ ಕುಡಿಯುವ ನೀರು/ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯಡಿ ಅಗತ್ಯವಿರುವ ೨.೮ ಟಿಎಂಸಿ ಕುಡಿಯುವ ನೀರನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಈ ಬೇಡಿಕೆ ಮಂಡಿಸಿದರು.

ಸಮಿತಿ ಅಧ್ಯಕ್ಷ ಟಿ.ಎ. ಶರವಣ ಹಾಗೂ ಸದಸ್ಯರ ತಂಡ ಜಲಸಂಪನ್ಮೂಲ ಮತ್ತು ಸಹಕಾರ ಇಲಾಖೆಗಳ ಭರವಸೆಗಳ ಕುರಿತು ಚರ್ಚೆ ನಡೆಸಲು ಕೋಲಾರಕ್ಕೆ ಭೇಟಿ ನೀಡಿತ್ತು.

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಮತ್ತು ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ನಿವೇಶನ ಮಂಜೂರು ಮಾಡುವ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಯಾವುದೇ ನೈಸರ್ಗಿಕ ಹರಿಯುವ ಜಲಮೂಲಗಳಿಲ್ಲ. ೩,೦೦೦ ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಗ್ರಹವಾಗುವ ನೀರನ್ನೇ ಕೃಷಿ ಮತ್ತು ಜೀವನಕ್ಕೆ ಅವಲಂಬಿಸಲಾಗಿದೆ.

ಪ್ರಸ್ತುತ ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳನ್ನು ತುಂಬಿಸಲಾಗುತ್ತಿದೆ, ಇದು ಅಂತರ್ಜಲ ವೃದ್ಧಿಗೆ ಸಹಾಯಕವಾಗಿದೆಯೇ ಹೊರತು ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಉಳಿದಿದೆ. ಜಿಲ್ಲೆಯಾದ್ಯಂತ ಕುಡಿಯುವ ನೀರು ಒದಗಿಸಲು ಕನಿಷ್ಠ ೨.೮ ಟಿಎಂಸಿ ನೀರಿನ ಅಗತ್ಯವಿದ್ದು, ಎತ್ತಿನಹೊಳೆ ಯೋಜನೆಯಡಿ ನೀರು ಒದಗಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಎತ್ತಿನಹೊಳೆ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿ ೨೦೧೪ರಲ್ಲಿ ಪ್ರಾರಂಭವಾದ ಈ ಯೋಜನೆ ಒಟ್ಟು ೨೪,೦೦೦ ಕೋಟಿ ರೂ. ವೆಚ್ಚದ್ದಾಗಿದೆ. ಜಲಾಶಯದಲ್ಲಿ ಗರಿಷ್ಠ ೨೪ ಟಿಎಂಸಿ ನೀರು ಸಂಗ್ರಹವಾಗುವ ನಿರೀಕ್ಷೆ ಇದ್ದು, ಅದರಲ್ಲಿ ೧೮ ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಚಿಂತಿಸಲಾಗಿದೆ. ಉಳಿದ ೧೦ ಟಿಎಂಸಿ ನೀರನ್ನು ಏಳು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಬಳಸಲಾಗುವುದು ಎಂದು ತಿಳಿಸಿದರು.

ಯೋಜನೆಯಡಿ ಅಕ್ಟೋಬರ್ ೨೦೨೭ರ ವೇಳೆಗೆ ಕೋಲಾರಕ್ಕೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಮಿತಿ ಅಧ್ಯಕ್ಷ ಟಿ.ಎ. ಶರವಣ ಮಾತನಾಡಿ ಪಕ್ಕದ ರಾಜ್ಯಗಳಲ್ಲಿ ೫೦೦ಕ್ಕೂ ಹೆಚ್ಚು ಕಿ.ಮೀ. ದೂರದಿಂದ ಕೃಷ್ಣಾ ನದಿ ನೀರನ್ನು ತರಲಾಗಿದೆ. ಕೋಲಾರಕ್ಕೆ ನೀರು ತರಲು ಕೇವಲ ೨೫೨ ಕಿ.ಮೀ. ಕ್ರಮಿಸಬೇಕಿದೆ. ಇಚ್ಛಾಶಕ್ತಿ ಇದ್ದರೆ ಇಂತಹ ಕಾರ್ಯಗಳನ್ನು ಸಾಧಿಸಬಹುದು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕರು, ಈಗಾಗಲೇ ೩೨.೫ ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲು ಸರ್ಕಾರ ಉತ್ಸುಕವಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ, ಕೆ. ಪ್ರತಾಪಸಿಂಹ ನಾಯಕ್, ಕೆ.ಎಸ್.ನವೀನ್, ಜಿ.ಪಂ ಸಿಇಒ ಡಾ. ಪ್ರವೀಣ್ ಬಾಗೇವಾಡಿ ಉಪಸ್ಥಿತರಿದ್ದರು.

ಬಾಕ್ಸ್:

ಎಪಿಎಂಸಿಗೆ ೧೦೦ ಎಕರೆ ಜಾಗ:

ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಗೆ ೧೦೦ ಎಕರೆ ಜಾಗದ ಅವಶ್ಯಕತೆ ಇದ್ದು ಇದಕ್ಕಾಗಿ ಪ್ರಯತ್ನಗಳು ನಡೆದಿವೆ ಎಂದು ಜಿಲ್ಲಾಧಿಕಾರಿ ರವಿ ವಿವರಿಸಿ ಪ್ರಸ್ತುತ ಮಾರುಕಟ್ಟೆಗೆ ೬೦ ಎಕರೆ ಕಂದಾಯ ಜಾಗ ಗುರುತಿಸಲಾಗಿದೆ. ಇದಕ್ಕೆ ಹೊಂದಿಕೊAಡಿರುವ ೨೦ ಎಕರೆ ಅರಣ್ಯ ಪ್ರದೇಶ ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಗುರುತಿಸಲಾದ ೬೦ ಎಕರೆ ಜಾಗ ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರಸ್ತಾವನೆಯ ಎಲ್ಲಾ ವಿವರಗಳನ್ನು ಸಮಿತಿಗೆ ಸಲ್ಲಿಸಿದರೆ, ಸಂಸದರ ನಿಯೋಗವನ್ನು ಕಳುಹಿಸಿ ಜಾಗ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಸಮಿತಿ ಅಧ್ಯಕ್ಷರು ಭರವಸೆ ನೀಡಿದರು.

ಚಿತ್ರ ೧೮ ಕೆ.ಎಲ್.ಆರ್. ೦೧ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಟಿ.ಎ. ಶರವಣ, ಸಮಿತಿ ಸದಸ್ಯರಾದ ನಿರಾಣಿ ಹಣಮಂತ ರುದ್ರಪ್ಪ, ಕೆ. ಪ್ರತಾಪಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮುಂತಾದವರಿದ್ದರು.