ನ್ಯೂಸ್

ಕೋಲಾರದಲ್ಲಿ ಬೀದಿ ನಾಯಿ ನಿಯಂತ್ರಣಕ್ಕೆ ಲಸಿಕೆ ಅಭಿಯಾನ

ವಿಜಯವಾಣಿ ಸುದ್ದಿಜಾಲ ಕೋಲಾರ

ಪಶುಸಂಗೋಪನೆ ಇಲಾಖೆ ಸಹಯೋಗದಲ್ಲಿ ಕೋಲಾರ ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಮೂಲಕ ಲಸಿಕಾಕರಣ ಮಾಡಲಾಗುತ್ತಿದೆ ಎಂದು ನಗರಸಭೆಯ ಆಯುಕ್ತ ಪ್ರಸಾದ್ ಅವರು ತಿಳಿಸಿದರು.

ನಗರದಲ್ಲಿ ಬೀದಿನಾಯಿಗಳಿಗೆ ಭಾನುವಾರ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿ, ನಗರ ಬೆಳೆದಂತೆ ಬೀದಿ ನಾಯಿಗಳ ಸಂತತಿ ಸಹ ಹೆಚ್ಚಾಗಿ ಅವುಗಳ ಹಾವಳಿಯಿಂದ ಸಮಸ್ಯೆ ಎದುರಾಗಿದೆ. ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಾಯಿಗಳ ನಿಯಂತ್ರಣಕ್ಕೆ ಅನುದಾನವನ್ನು ಮೀಸಲಿಟ್ಟು ಟೆಂಡರ್ ಕರೆಯಲಾಗಿತ್ತು.

ಅದರಂತೆ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮೊದಲ ಹಂತವಾಗಿ ನಗರದ ಪ್ರತಿಯೊಂದು ಗಲ್ಲಿಯಲ್ಲಿಯೂ ಬೀದಿನಾಯಿಗಳನ್ನು ಹಿಡಿದು ರೇಬಿಸ್ ನಿರೋದಕ ಲಸಿಕೆಯನ್ನು ನೀಡಲಾಗುತ್ತಿದೆ. ಬೀದಿ ನಾಯಿಗಳು ಎಲ್ಲೆಂದರಲ್ಲಿ ಸಂಚರಿಸುವ ಕಾರಣ ಲಸಿಕೆ ಮಾಡಿದ ನಾಯಿಗಳಿಗೆ ಗುರುತು ಮಾಡಲಾಗುತ್ತಿದೆ. ಹೀಗೆ ನಗರದ ಪ್ರತಿಯೊಂದು ವಾರ್ಡ್ನಲ್ಲಿಯೂ ನಾಯಿಗಳಿಗೆ ನುರಿತ ತಜ್ಞರಿಂದ ಲಸಿಕೆ ಹಾಕಲಾಗುತ್ತದೆ. ಲಸಿಕಾಕರಣ ಮಾಡಿದ ನಾಯಿ ಮನುಷ್ಯನಿಗೆ ಕಚ್ಚಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಭಾನುವಾರದಿಂದ ಈ ವರೆಗೆ ೧೬೫ ನಾಯಿಗಳಿಗೆ ಲಸಿಕಾ ಕರಣ ಮಾಡಲಾಗಿದೆ ಎಂದರು.

ಚಿತ್ರ ೦೯ ಕೆ.ಎಲ್.ಆರ್. ೦೬ : ಬೀದಿ ನಾಯಿಗಳಿಗೆ ನಗರಸಭೆ ವತಿಯಿಂದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ನಗರಸಭೆ ಆಯುಕ್ತ ಪ್ರಸಾದ್ ಹಾಗೂ ಸಿಬ್ಬಂದಿ.