ನ್ಯೂಸ್

ಕೋಲಾರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ / ಮೆರವಣಿಗೆಯಲ್ಲಿ ಕಲಾ ತಂಡಗಳ ಮೆರಗು / ರಥವನ್ನು ಸ್ವಾಗತಿಸಿದ ಜನಪ್ರತಿನಿಧಿಗಳು

ವಿಜಯವಾಣಿ ಸುದ್ದಿಜಾಲ ಕೋಲಾರ

ಮಂಡ್ಯದಲ್ಲಿ ಡಿ.೨೦, ೨೧ ಮತ್ತು ೨೨ ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡದ ಜ್ಯೋತಿ ಹೊತ್ತ ಕನ್ನಡದ ತೇರು ಗುರುವಾರ ಕೋಲಾರಕ್ಕೆ ಆಗಮಿಸಿದಾಗ ಅದ್ದೂರಿ ಸ್ವಾಗತ ನೀಡಲಾಯಿತು.

ಮೆರವಣಿಗೆಯಲ್ಲಿ ಗಾರುಡಿ ಗೊಂಬೆಗಳು ನೃತ್ಯ ಮಾಡುವ ಮೂಲಕ ಹಾಗೂ ವೀರಗಾಸೆ ತಂಡಗಳ ಅಕರ್ಷಕ ನೃತ್ಯವು ಸ್ವಾಗತಕ್ಕೆ ಮೆರಗು ನೀಡಿತು.

ಕೋಲಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೋಲಾರದ ಪ್ರವಾಸಿ ಮಂದಿರದ ಬಳಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ನೆರವೇರಿಸಿ ಕನ್ನಡದ ರಥವನ್ನು ವಿಜೃಂಭಣೆಯಿAದ ಸ್ವಾಗತಿಸಲಾಯಿತು.

ಜ್ಯೋತಿ ಹೊತ್ತ ರಥ ಯಾತ್ರೆಯ ವಿಶೇಷತೆ:

ಕನ್ನಡ ಜ್ಯೋತಿ ರಥ ಯಾತ್ರೆಯ ವಾಹನದ ಮುಂಭಾಗದಲ್ಲಿ ಪ್ರಮುಖವಾಗಿ ತಾಯಿ ಭುವನೇಶ್ವರಿ ಮಾತೆ ಪ್ರತಿಮೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಒಳಗೊಂಡಿದ್ದು ಎದ್ದುಕಾಣುತ್ತಿತ್ತು.

ತಾಯಿ ಭುವನೇಶ್ವರಿ ಬಳಿ ತಾಯಿ ಮಾತೆ ಕಾವೇರಿ ಪ್ರತಿಮೆ ಒಳಗೊಂಡ ಕೃಷ್ಣರಾಜ ಸಾಗರ ಅಣೆಕಟ್ಟು ಬರೆದಿದ್ದು ವಿಶೇಷವಾಗಿತ್ತು.

ಜ್ಯೋತಿ ಹೊತ್ತ ರಥದ ಎಡ ಮತ್ತು ಬಲ ಬದಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ ಅವರುಗಳನ್ನು ಒಳಗೊಂಡ ಭಾವಚಿತ್ರ ಅಳವಡಿಸಿದ್ದು ವಿಶೇಷವಾಗಿತ್ತು.

ಜ್ಯೋತಿ ಹೊತ್ತ ರಥದ ಹಿಂಭಾಗದಲ್ಲಿ ಎತ್ತುಗಳ ಜೊತೆ ರೈತ ಉಳುಮೆ ಮಾಡುವ ದೃಶ್ಯ ಮನಮೋಹಕವಾಗಿತ್ತು. ಜೊತೆಗೆ ಕರ್ನಾಟಕ ರಾಜ್ಯದ ಲಾಂಛನ, ಮಧ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲೋಗೋ ಒಳಗೊಂಡಿದ್ದು ಗಮನ ಸೆಳೆಯಿತು

ಕೋಲಾರ ಶಾಸಕ ಕೊತ್ತೂರು. ಜಿ. ಮಂಜುನಾಥ್, ಕೋಲಾರ ಸಂಸದ ಎಂ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರು ಗೋಪಾಲ ಗೌಡ, ಜಿಲ್ಲಾಧಿಕಾರಿ ಅಕ್ರಂಪಾಷ, ಅಪರ ಜಿಲ್ಲಾಧಿಕಾರಿ ಮಂಗಳ, ಉಪವಿಭಾಗಾಧಿಕಾರಿ ಡಾ. ಮೈತ್ರಿ,ಕೋಲಾರ ತಹಸೀಲ್ದಾರ್ ನಯನ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಕನ್ನಡಭಿಮಾನಿಗಳು ಹಾಜರಿದ್ದು, ರಥವನ್ನು ಸ್ವಾಗತಿಸಿದರು.

ಚಿತ್ರ ೨೧ ಕೆ.ಎಲ್.ಆರ್. ೦೩ : ಕೋಲಾರಕ್ಕೆ ಆಗಮಿಸಿದ ಕನ್ನಡ ರಥದ ತೇರನ್ನು ಸ್ವಾಗತಿಸಿದ ಶಾಸಕ ಕೊತ್ತೂರು ಮಂಜುನಾಥ್, ಸಂಸದ ಎಂ.ಮಲ್ಲೇಶ್‌ಬಾಬು, ವಿಧಾನಪರಿಷತ್ತು ಸದಸ್ಯ ಅನಿಲ್‌ಕುಮಾರ್, ಜಿಲ್ಲಾಧಿಕಾರಿ ಅಕ್ರಂಪಾಷ ಮುಂತಾದವರಿದ್ದರು.