ನ್ಯೂಸ್

ಕೋಲಾರದ ಬಳಿ ರೈಲ್ವೇ ಕೋಚ್ ಫ್ಯಾಕ್ಟರಿ ಪ್ರಾರಂಭಕ್ಕೆ ಚಾಲನೆ ನೀಡಲು ಕೇಂದ್ರ ರೈಲ್ವೇ ರಾಜ್ಯ ಸಚಿವರಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಮನವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಬಳಿ ಉದ್ದೇಶಿತ ರೈಲ್ವೇ ಕೋಚ್ ಕಾರ್ಖಾನೆ ನಿರ್ಮಾಣ ಬಹುದಿನಗಳ ಕನಸಾದ ಯೋಜನೆಯಾಗಿದ್ದು, ಯೋಜನೆಗೆ ತ್ವರಿತ ಗತಿಯಲ್ಲಿ ಚಾಲನೆ ನೀಡಲು ಕ್ರಮವಹಿಸಬೇಕೆಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ವಿ.ಸೋಮಣ್ಣನವರಿಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮನವಿ ಮಾಡಿದರು.

ಬೆಂಗಳೂರಿನ ಕುಮಾರಕೃಪದಲ್ಲಿ ಸಚಿವ ವಿ.ಸೋಮಣ್ಣ ರವರ ಅಧ್ಯಕ್ಷತೆಯಲ್ಲಿ ರೈಲ್ವೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಚಿವ ಮುನಿಯಪ್ಪ ಕೇಂದ್ರದಲ್ಲಿ ರೈಲ್ವೆ ಸಚಿವನಾಗಿದ್ದಾಗ ಅಂದು ಜಾರಿಗೊಳಿಸಿದ್ದ ಪ್ರಮುಖ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದರು.

ಶ್ರೀನಿವಾಸಪುರದ ಬಳಿ ಉದ್ದೇಶಿತ ರೈಲ್ವೇ ಕೋಚ್ ಫ್ಯಾಕ್ಟರಿ ಬಹುದಿನಗಳ ಕನಸಾದ ಯೋಜನೆಯಾಗಿದೆ. ಕೋಚ್ ಫ್ಯಾಕ್ಟರಿ ನಿರ್ಮಾಣವಾದಲ್ಲಿ ಆ ಭಾಗದ ಜನಕ್ಕೆ ಹೆಚ್ಚು ಅನುಕೂಲವಾಗುತ್ತದೆ. ರೈಲ್ವೇ ಬೋಗಿಗಳ ನಿರ್ಮಾಣದಿಂದ ನಮ್ಮ ದಕ್ಷಿಣ ಭಾರತದ ರಾಜ್ಯಕ್ಕೆ ಹೆಸರುವಾಸಿ ಆಗುತ್ತದೆ ಎಂದರು.

೧೨೦೦ ಎಕರೆ ಜಮೀನು ಅವಶ್ಯಕತೆ :

ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣದ ಯೋಜನೆಗೆ ಸುಮಾರು ೧೨೦೦ ಎಕರೆ ಜಮೀನಿನ ಅವ್ಯಶ್ಯಕತೆ ಇದೆ. ನಾನು ಕೇಂದ್ರದ ರೈಲ್ವೆ ಸಚಿವನಾದಾಗ ಜಾರಿಗೊಳಿಸಿದ್ದ ಈ ಪ್ರಮುಖ ಯೋಜನೆಯಾಗಿದ್ದು, ಅಲ್ಲಿ ಸರ್ಕಾರದ ಜಮೀನಿ ಈಗಾಗಲೇ ೭೦೦ ಎಕರೆ ಮೀಸಲಿಟ್ಟಿದ್ದು, ಉಳಿದ ೫೦೦ ಎಕರೆ ಜಮೀನು ಅವಶ್ಯಕತೆ ಇದೆ. ತಾವು ಮನಸ್ಸು ಮಾಡಿದರೆ ಸರ್ಕಾರ ಎಲ್ಲಾ ರೀತಿಯಲ್ಲಿ ತಮಗೆ ಸಹಕಾರ ನೀಡಲಿದ್ದು, ಈ ಯೋಜನೆಯನ್ನು ತ್ವರಿತಗತಿಯಲ್ಲಿ ಚಾಲನೆ ನೀಡಲು ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಕೌಶಲ್ಯ ಅಭಿವೃದ್ಧಿ ಸಚಿವರಾದ ಕುಮಾರಿ ಶೋಭಾ ಕರಂದಲ್ಲಾಜೆ, ಸಂಸದರಾದ ಡಾ.ಕೆ ಸುಧಾಕರ್, ಪಿಸಿ.ಮೋಹನ್, ಹಾಗೂ ಬೆಂಗಳೂರು ಗ್ರಾಮಾಂತರ ಸಂಸದರಾದ ಸಿ.ಎನ್.ಮಂಜುನಾಥ್ ಸೇರಿದಂತೆ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೦೭ ಕೆ.ಎಲ್.ಆರ್. ೦೩ : ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ನವರು ಕೇಂದ್ರ ರೈಲ್ವೇ ಸಚಿವರಾಗಿದ್ದಲ್ಲಿ ಜಾರಿಗೊಳಿಸಲಾದ ಪ್ರಮುಖ ಯೋಜನೆಗಳು ಸೇರಿದಂತೆ ಕೋಲಾರದ ಬಳಿ ರೈಲ್ವೇ ಕೋಚ್ ಫ್ಯಾಕ್ಟರಿ ತ್ವರಿತ ಗತಿಯಲ್ಲಿ ಚಾಲನೆ ನೀಡಲು ಕೇಂದ್ರ ರೈಲ್ವೇ ರಾಜ್ಯ ಸಚಿವ ಪಿ.ಸೋಮಣ್ಣ ನವರಿಗೆ ಮನವಿ ನೀಡುತ್ತಿರುವುದು.