ನ್ಯೂಸ್

ಕೋಲಾರ ನಗರದಲ್ಲಿ ಮತ್ತೆ ಕಸದ ರಾಶಿಗಳ ಸದ್ದು / ಗಲ್ಲಿ ರಸ್ತೆಗಳಲ್ಲಿ ವಿಲೇವಾರಿ ಮಾಡದ ಕಸದ ರಾಶಿಗಳು / ದೇವಸ್ಥಾನಗಳ ಬಳಿ ಕಸದ ರಾಶಿಗಳ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ನಗರದಲ್ಲಿ ಮತ್ತೆ ಕಸದ ರಾಶಿಗಳು ಸದ್ದು ಮಾಡುತ್ತಿವೆ. ಜನನಿಬಿಡ ರಸ್ತೆಗಳು ಹೊರತುಪಡಿಸಿ ಗಲ್ಲಿ ರಸ್ತೆಗಳಲ್ಲಿ ಕಸದ ರಾಶಿಗಳು ರಸ್ತೆಬದಿಗಳಲ್ಲಿರುವ ಚರಂಡಿಗಳಲ್ಲಿ ತುಂಬಿ ತುಳುಕುತ್ತಿವೆ.

ನಗರಸಭೆಯವರಿಗೆ ಸಾರ್ವಜನಿಕರು ಸ್ಪಂಧಿಸದೇ ಇರುವುದೇ ಕಸದ ರಾಶಿಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರೇ ಆರೋಪಿಸುತ್ತಿದ್ದಾರೆ. ಕಸ ತುಂಬಲು ರಸ್ತೆಗೆ ಬರುವ ಕಸದ ವಾಹನಗಳಿಗೆ ಕಸವನ್ನು ಸುರಿಯದೇ ರಾತ್ರಿ ವೇಳೆ ಗಲ್ಲಿ ರಸ್ತೆಗಳಲ್ಲಿ ಕಸದ ತ್ಯಾಜ್ಯವನ್ನು ಎಸೆದು ಬರುತ್ತಿದ್ದಾರೆ. ಅಂತವರಿಗೆ ಸ್ವಚ್ಛತೆಯ ಅರಿವು ಅವಶ್ಯಕತೆ ಇದೆ.

ನಗರದ ವಾಣಿಜ್ಯ ಮಳಿಗೆಗಳಲ್ಲಿ ಇರುವ ತ್ಯಾಜ್ಯ ರಾತ್ರಿ ವೇಳೆ ಗಲ್ಲಿ ರಸ್ತೆಗಳಲ್ಲಿ ಸುರಿಯುವ ಕೆಲಸ ವ್ಯಾಪಾರಿಗಳೇ ಮಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆಯವರು ವ್ಯಾಪಾರಿಗಳಿಗೆ ಮೌಖಿಕ ಆದೇಶ ನೀಡಿದ್ದರೂ ಸಹ ಕಸದ ತ್ಯಾಜ್ಯವನ್ನು ಚರಂಡಿಗಳಿಗೆ ಎಸೆಯುವ ಕೆಲಸ ಮಾಡುತ್ತಿರುವುದರಿಂದ ನಗರದಲ್ಲಿ ಕಸದ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತಾಗಿದೆ.

ಕೋಲಾರ ನಗರ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಆದರೆ ನಗರಸಭೆಯ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗದೇ ಇರುವುದರಿಂದ ಇರುವ ಕಾರ್ಮಿಕರಿಂದಲೇ ಸ್ವಚ್ಛತೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಸಾರ್ವಜನಿಕರಿಗೆ ಅರಿವಿಲ್ಲದೇ ತ್ಯಾಜ್ಯವನ್ನು ಗಲ್ಲಿ ರಸ್ತೆ ಮತ್ತು ಚರಂಡಿಗಳಿಗೆ ತಂದು ಎಸೆಯುತ್ತಿರುವುದರಿಂದ ಕಸ ವಿಲೇವಾರಿಯಾಗದೇ ರಾಶಿಗಳಾಗಿ ಉಳಿಯುವಂತಾಗಿದೆ.

ನಗರದ ಅರಳೇಪೇಟೆಯ ಖಾಸಗಿ ವಿಶ್ವೇಶ್ವರನಾಥಸ್ವಾಮಿ ಮತ್ತು ಬಯಲು ಬಸವೇಶ್ವರ ದೇವಸ್ಥಾನದ ಮಧ್ಯೆ ಭಾಗದಲ್ಲಿರುವ ರಸ್ತೆಯಲ್ಲಿ ಕಸದ ರಾಶಿ ಖಾಲಿಯಾಗುವುದೇ ಇಲ್ಲ. ನಗರಸಭೆಯವರು ವಾರಕ್ಕೆ ೨ ಬಾರಿ ಕಸ ತೆಗೆದರು ಮತ್ತೆ ಕಸ ಆವರಿಸಿಕೊಳ್ಳುತ್ತಿದೆ. ಈ ಪೇಟೆಯ ಸುತ್ತಮುತ್ತ ರಸ್ತೆಗಳಲ್ಲಿ ವ್ಯಾಪಾರಸ್ಥರೇ ಹೆಚ್ಚಾಗಿರುವುದರಿಂದ ಇಲ್ಲಿನ ರಾತ್ರಿ ವೇಳೆಯಲ್ಲಿ ತ್ಯಾಜ್ಯವನ್ನು ಅಂಗಡಿಗಳವರು ಎಸೆದು ಹೋಗುತ್ತಾರೆ. ಹಾಗೂ ಅಕ್ಕಪಕ್ಕದ ಮನೆಗಳವರು ಕಸವನ್ನು ತಂದು ಸುರಿದು ಹೋಗುತ್ತಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಚಿತ್ರ ೨೮ ಕೆ.ಎಲ್.ಆರ್. ೦೩ : ಅರಳೇಪೇಟೆಯ ಕಾಶಿವಿಶ್ವನಾಥಸ್ವಾಮಿ ದೇವಸ್ಥಾನ ಮತ್ತು ಬಯಲು ಬಸವೇಶ್ವರ ಸ್ವಾಮಿ ದೇವಸ್ಥಾನಗಳ ಮಧ್ಯಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವುದು.