ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದರೂ ಕೋಲಾರ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.೪೭ ರಷ್ಟು ಮಳೆ ಕಡಿಮೆಯಾಗಿದ್ದು, ಜೂನ್, ಜುಲೈ ತಿಂಗಳು ಕಳೆದರು ಬಿತ್ತನೆಗೆ ಮಳೆ ಕೊರತೆಯಾಗಿರುವ ಕಾರಣ ಇದುವರೆವಿಗೂ ಶೇ.೩೦ ರಷ್ಟು ಮಾತ್ರ ಜಿಲ್ಲೆಯಲ್ಲಿ ಬಿತ್ತನೆಯಾಗಿದೆ. ಇನ್ನು ಶೇ.೭೦ ರಷ್ಟು ಬಿತ್ತನೆ ಆಗಬೇಕಾಗಿದೆ.
ಜೂನ್ ೧ ರಿಂದ ಜುಲೈ ೩೧ ರ ತನಕ ಜಿಲ್ಲೆಯಲ್ಲಿ ೧೪೪ ಮಿ.ಮೀ ಮಳೆಯಾಗಿದೆ. ಬಿತ್ತನೆಗೆ ಮಳೆ ಕೊರತೆಯಾಗಿರುವ ಕಾರಣ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಕಳೆದ ೨ ತಿಂಗಳಿAದ ಶೇ.೫ ರಷ್ಟು ಮಾತ್ರ ಬಿತ್ತನೆಯಾಗಿದ್ದು, ಕಳೆದ ಒಂದು ವಾರದಿಂದ ಶೇ.೨೦ ರಷ್ಟು ಮಾತ್ರ ಬಿತ್ತನೆ ಕಾರ್ಯ ಸಾಗಿದೆ. ೨ ದಿನಗಳಿಂದ ಮಳೆ ಇಲ್ಲದ ಕಾರಣ ಮತ್ತೆ ಹಿನ್ನಡೆಯುಂಟಾಗಿದೆ.
ಕೋಲಾರ ಜಿಲ್ಲೆಯು ರಾಗಿ ಕಣಜ ಎಂದೇ ಹೆಸರು ಆಗಿದೆ. ಇದರ ಜೊತೆಗೆ ನೆಲಗಡಲೆ, ತೊಗರಿ, ಅವರೆ, ಹಲಸಂದೆಯು ಮಳೆಯಾಶ್ರಿತ ಬೆಳೆಗಳಾಗಿರುವ ಕಾರಣ ರಾಗಿ ಬಿತ್ತನೆಗೆ ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದ ತನಕವೂ ಕಾಲಾವಕಾಶ ಇರುವುದರಿಂದ ನೆಲಗಡಲೆ ಬಿತ್ತನೆಗೆ ಕಾಲಾವಕಾಶ ಮುಗಿಯುತ್ತಾ ಬಂದಿದ್ದು, ನೆಲಗಡಲೆ ಬೀಜವನ್ನು ಶೇಖರಣೆ ಮಾಡಿಕೊಂಡು ಇಟ್ಟುಕೊಂಡಿರುವ ರೈತರು ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ಉಂಟಾಗಿದೆ.
೭೨೯೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ :
ಜಿಲ್ಲೆಯಲ್ಲಿ ೭೨೯೦೦ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಶೇ.೩೦ ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯ ಬಂಗಾರಪೇಟೆಯಲ್ಲಿ ಹೆಚ್ಚು ಬಿತ್ತನೆ ಕಾರ್ಯ ನಡೆದಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ೧೧.೯೯೯ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ೮.೧೭೭ ಹೆಕ್ಟೇರ್ ಪ್ರರ್ದೇಶದಲ್ಲಿ ಬಿತ್ತನೆಯಾಗಿದೆ.
ಉಳಿದಂತೆ ಕೆ.ಜಿ.ಎಫ್.ತಾಲ್ಲೂಕಿನಲ್ಲಿ ೩.೧೨೭ ಹೆಕ್ಟೇರ್ ಪ್ರದೇಶದಲ್ಲಿ, ಕೋಲಾರದಲ್ಲಿ ೪.೩೪೪ ಹೆಕ್ಟೇರ್, ಮಾಲೂರಿನಲ್ಲಿ ೧.೩೧೪, ಮುಳಬಾಗಿಲಿನಲ್ಲಿ ೫.೨೫೦, ಶ್ರೀನಿವಾಸಪುರದಲ್ಲಿ ೪೭೯ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.
ರಾಗಿ ಬಿತ್ತನೆ ಮಾಡಲು ಮಾತ್ರ ಕಾಲಾವಕಾಶ ಇನ್ನು ಉಳಿದಿದ್ದು, ಉಳಿದಂತೆ ನೆಲಗಡಲೆ, ತೊಗರಿ, ಹಲಸಂದೆಗೆ ಈ ವಾರ ಮಳೆ ಬೀಳದೆ ಹೋದರೆ ಅದಕ್ಕೂ ಕಾಲಾವಕಾಶ ಮುಗಿಯುತ್ತಿರುವುದರಿಂದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ :
ಜಿಲ್ಲೆಯಲ್ಲಿ ಜುಲೈ ಅವಧಿಗೆ ೮.೩೫೯ ಮೆಟ್ರಿಕ್ ಟನ್ ಯೂರಿಯಾ, ರಸಗೊಬ್ಬರ ಅಗತ್ಯವಿದ್ದು, ೯.೭೯೩ ಮೆಟ್ರಿಕ್ ಟನ್ ಪೂರೈಕೆ ಆಗಿದೆ. ೧.೨೬೧.೭೫ ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆಯು ಆಗಿದ್ದು, ದಾಸ್ತಾನು ಇರುವುದರಿಂದ ಸದ್ಯಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋಟ್
ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆ. ರಾಗಿ ಬಿತ್ತನೆಗೆ ಸೆಪ್ಟೆಂಬರ್ ೧೫ರ ತನಕ ಕಾಲಾವಾಶ ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಕಳೆದ ಒಂದು ವಾರದಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹೀಗೆ ಮಳೆ ಮುಂದುವರೆದರೆ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ. ಗೊಬ್ಬರ ಸೇರಿದಂತೆ ಬಿತ್ತನೆ ಬೀಜಗಳಿಗೆ ಕೊರತೆ ಇಲ್ಲ. ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ಲಭ್ಯವಿದೆ.
-ಎಂ.ಆರ್.ಸುಮ, ಜಂಟಿ ಕೃಷಿ ನಿರ್ದೇಶಕರು, ಕೋಲಾರ.
ಚಿತ್ರ ೦೩ ಕೆ.ಎಲ್.ಆರ್. ೦೩ : ಎಂ.ಆರ್.ಸುಮ, ಜಂಟಿ ಕೃಷಿ ನಿರ್ದೇಶಕರು, ಕೋಲಾರ
ಚಿತ್ರ ೦೩ ಕೆ.ಎಲ್.ಆರ್. ೦೩ಎ : ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು