ನ್ಯೂಸ್

ಕೋಲಾರ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಬದ್ಧತೆ ಜನಪ್ರತಿನಿಧಿಗಳಿಗಿಲ್ಲ / ಹಿರಿಯ ವಕೀಲ ಎಂ.ಶಿವಪ್ರಸಾದ್ ಅರಣ್ಯ ಮತ್ತು ಕಂದಾಯ ಇಲಾಖೆ ಮಧ್ಯೆ ಇರುವ ಶೀಥಲ ಸಮರ ಒಪ್ಪಿಕೊಂಡ ಜಿಲ್ಲಾಧಿಕಾರಿ ಎಂ.ಆರ್.ರವಿ / ಎಲ್ಲವೂ ಸದ್ಯದಲ್ಲೇ ಸರಿಹೋಗುತ್ತದೆ / ರೈತರು ಆತಂಕ ಪಡಬೇಕಾಗಿಲ್ಲ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲು ಸಮಯವಿಲ್ಲ. ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿಲ್ಲ. ಅವರಿಗೆ ಬದ್ಧತೆ ಇಲ್ಲದಂತೆ ಆಗಿದೆ ಎಂದು ಕರ್ನಾಟಕ ಉಚ್ಛನ್ಯಾಯಾಲಯದ ಹಿರಿಯ ವಕೀಲ ಎಂ.ಶಿವಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕೆಪಿಆರ್‌ಎಸ್ ಸಂಘಟನೆಯಿAದ ಜಿಲ್ಲೆಯಲ್ಲಿ ಅರಣ್ಯ ಭೂಮಿ ಬಗರ್‌ಹುಕುಂ ಸಾಗುವಳಿ, ರೈತರ ವಿರೋಧಿ ಭೂಸ್ವಾಧೀನ, ಪಿ.ನಂಬರ್‌ಗಳ ದುರಸ್ಥಿ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಲಾದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

ಜನಪ್ರತಿನಿಧಿಗಳು ಭ್ರಷ್ಟಾಚಾರಿಗಳನ್ನ ರಕ್ಷಿಸುತ್ತಿದ್ದಾರೆ. ಬಡ ರೈತರಿಗೆ ಭೂಮಿ ಹಂಚಿಕೆ ಮಾಡಲು ಕರ್ನಾಟಕದಲ್ಲಿ ನಲವತ್ತಕ್ಕೂ ಹೆಚ್ಚು ಭೂ ಸುಧಾರಣಾ ಹಾಗೂ ಭೂ ಕಾಯ್ದೆಗಳು ಅಸ್ತಿತ್ವಕ್ಕೆ ಬಂದಿದ್ದರು, ಬಡ ರೈತರನ್ನ ರಕ್ಷಿಸುವ ಮತ್ತು ಭೂಮಿ ಹಂಚಿಕೆ ಮಾಡುವ ಕಾರ್ಯ ಪೂರ್ಣಗೊಂಡಿಲ್ಲವೆAದು ಅಸಮಾಧಾನವನ್ನು ಹೊರಹಾಕಿದರು.

ಕೋಲಾರ ಜಿಲ್ಲೆ ಮತ್ತು ಬಯಲು ಸೀಮೆಯ ಅನೇಕ ಜಿಲ್ಲೆಗಳಲ್ಲಿ ಯಾವುದೇ ದಟ್ಟ ಅರಣ್ಯಗಳು ಬೆಳೆದಿಲ್ಲ. ಈ ಪ್ರದೇಶದಲ್ಲಿ ಕಡಿಮೆ ಮಳೆ ಬೀಳುವುದರಿಂದ ಯಾವುದೇ ನದಿ ನಾಲೆಗಳು ರೂಪಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ದರ್ಪ ಮತ್ತು ದೌರ್ಜನ್ಯಗಳಿಂದ ಸಾವಿರದ ಒಂಬೈನೂರ ತೊಂಬತ್ತೈದರ ಗೋದಾವರಂ ಕೇಸನ್ನ ಅಡ್ಡ ಇಟ್ಟುಕೊಂಡು ಕಾನೂನು ಬದ್ಧವಾಗಿ ನ್ಯಾಯ ಬದ್ಧವಾಗಿ ಭೂ ಸಕ್ರಮಾತಿ ಸಮಿತಿಗಳಿಂದ ರೈತರು ಹಕ್ಕು ಪಡೆದ ಭೂಮಿಗಳಿಂದ ರೈತರನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿ ಕುಳಿತಿರುವುದು ರೈತರ ಈ ಅನಾಹುತಗಳಿಗೆ ಕಾರಣರಾಗಿದ್ದಾರೆ. ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಧಿ, ಜಪಾನ್ ಮತ್ತಿತರೆ ರಾಷ್ಟ್ರಗಳಿಂದ ಬರುವ ಅಂತರಾಷ್ಟ್ರೀಯ ನಿಧಿಯನ್ನು ಇರುವ ಅರಣ್ಯದಲ್ಲಿ ಗಿಡ ಬೆಳೆಸುವ ಬದಲಿಗೆ ರೈತರು ಬೆಳೆಸಿರುವ ಮರಗಿಡಗಳನ್ನ ಮತ್ತು ಬೆಳೆಗಳನ್ನು ನಾಶ ಮಾಡಲು ದುಂದು ವೆಚ್ಚ ಮಾಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ರೈತರು ಸಂಘಟಿತರಾಗಿ ಹೋರಾಟ ಮಾಡುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ದುAಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎಂ. ಆರ್.ರವಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಜ್ಞಾವಂತರು ಮತ್ತು ಹೋರಾಟಗಾರರು ಇರುವ ನೆಲೆಯಾಗಿದ್ದರು, ರೈತರು ಹಲವು ರೀತಿಯ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.

ಜಿಲ್ಲೆಯಲ್ಲಿ ನೋಟಿಫೈಡ್, ಡೀಮ್ಡ್ ಫಾರೆಸ್ಟ್ ಮತ್ತು ಪಾಣಿ ರೆಕಾರ್ಡ್ ಫಾರೆಸ್ಟ್ ಎಂಬ ಮೂರು ರೀತಿಯಲ್ಲಿ ಅರಣ್ಯಗಳಿದ್ದು, ಇವುಗಳ ನಿರ್ದಿಷ್ಟಗೊಳಿಸುವಿಕೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ನಡುವೆ ಶೀತಲ ಸಮರ ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದರು.

ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಂತಿಮ ತೀರ್ಮಾನ ಜಿಲ್ಲಾ ಆಡಳಿತದ್ದೆ ಆಗಿರುವುದರಿಂದ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಹಿಂದೆ ಕೆಲವು ತಪ್ಪುಗಳು ನಡೆದಿರುವುದರಿಂದ ರೈತರಿಗೆ ಸಮಸ್ಯೆಗಳಾಗಿರುವುದು ನಿಜವಾಗಿದ್ದು, ಈ ಸಮಸ್ಯೆಗಳನ್ನ ಆದಷ್ಟು ಬೇಗ ಬಗೆಹರಿಸಲು ಜಿಲ್ಲಾಡಳಿತ ಸಿದ್ಧವಿದೆ. ತಮ್ಮ ಇಲಾಖೆಯಿಂದ ಆಗಿರುವ ಅನ್ಯಾಯ ಮತ್ತು ಲೋಪಗಳನ್ನ ಸರಿಪಡಿಸುವ ಕೆಲಸಕ್ಕೆ ಪ್ರಯತ್ನಗಳು ನಡೆಸುತ್ತೇವೆ. ಅಧಿಕಾರಿಗಳು ಸಾಮಾನ್ಯ ಮನುಷ್ಯರ ಬದುಕಿನ ಮೌಲ್ಯಗಳಿಗೆ ಗೌರವ ನೀಡಿ ಸಾರ್ವಜನಿಕ ಸೇವೆ ಮಾಡಬೇಕು, ಸವಾರಿ ಮಾಡಬಾರದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ರೈತರ ಪಿ. ನಂಬರುಗಳ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಆದರೆ ಕೆಲವು ರೈತರ ಕಡತಗಳಿಗೆ ಮೂಲ ದಾಖಲೆಗಳು ಸಿಗದಿರುವುದರಿಂದ ಕುಂಠಿತ ಗೊಂಡಿರುವುದಕ್ಕೆ ಕಾರಣವಾಗಿದೆ. ದುರಸ್ತಿ ಪರಿಹಾರಕ್ಕೆ ರೈತರ ಕಡೆಯಿಂದ ಆರ್ ಟಿ ಸಿ ಗೆ ಸಂಬAಧಿಸಿದ ಯಾವುದಾದರೂ ಒಂದು ದಾಖಲೆ ಇದ್ದರೂ ಕೂಡ ಅದನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದೇವೆ. ವಿಶೇಷವಾಗಿ ಈ ಕೆಲಸಕ್ಕೆ ಮತ್ತಷ್ಟು ವೇಗ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಘಟಕ ಪ್ರಾರಂಭಿಸುತ್ತಿದ್ದು, ನೇರವಾಗಿ ರೈತರು ಅಲ್ಲೇ ಅರ್ಜಿಯನ್ನ ನೀಡಬಹುದು ಎಂದರು.

ದುAಡು ಮೇಜಿನ ಸಭೆಯಲ್ಲಿ ವಿಷಯ ಮಂಡನೆ ಮಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಪಿ ಆರ್ ಸೂರ್ಯನಾರಾಯಣ ಕಂದಾಯ ಇಲಾಖೆಯ ಲೋಪಗಳು ಮತ್ತು ಅರಣ್ಯ ಇಲಾಖೆಯ ಅಕ್ರಮಣಕಾರಿ ನೀತಿಗಳಿಂದ ನ್ಯಾಯ ಬದ್ಧವಾಗಿ ಹಕ್ಕು ಪಡೆದಿದ್ದ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದರ ಜೊತೆಯಲ್ಲೇ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಭೂ ಸ್ವಾಧೀನ ಕ್ರಮಗಳನ್ನು ಅನುಸರಿಸಿ ಮತ್ತಷ್ಟು ರೈತರನ್ನು ಭೂಮಿಯಿಂದ ವಕ್ಕಲಬ್ಬಿಸುತ್ತಿರುವುದು ರೈತಾಪಿ ವರ್ಗದಲ್ಲಿ ಆತಂಕ ಉಂಟು ಮಾಡಿದೆ ಎಂದು ದೂರಿದರು.

ಜಿಲ್ಲೆಯ ಜನತೆಯ ಬೇಡಿಕೆಗಳ ಭಾಗವಾಗಿ ಕೈಗಾರಿಕೆಗಳು ಬಾರದೆ ಕಾರ್ಪೊರೇಟ್ ಬಂಡವಾಳಗಾರರನ್ನ ಮತ್ತು ರಿಯಲ್ ಎಸ್ಟೇಟ್ ದಂಧೆ ಕೋರರನ್ನ ಬೆಂಬಲಿಸುವ ಕೈಗಾರಿಕೆಗಳು ಬರುತ್ತಿವೆ. ಹಲವು ವರ್ಷಗಳ ಬೇಡಿಕೆಗಳಾದ ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಯಾಗದೆ ಟೊಮ್ಯಾಟೋ ಮತ್ತು ಮಾವಿನ ಹಣ್ಣುಗಳನ್ನು ಬೀದಿಗೆ ಸುರಿಯುವ ಪರಿಸ್ಥಿತಿ ಬಂದಿದೆ. ನಮ್ಮ ಜಿಲ್ಲೆಯಲ್ಲಿ ೨೦೧೩ರಲ್ಲಿ ಕೇಂದ್ರ ಸರ್ಕಾರದಿಂದ ರೈಲ್ವೆ ಕೋಚ್ ಫ್ಯಾಕ್ಟರಿ ಅಥವಾ ವೀಲ್ ಅಂಡ್ ಆಕ್ಸೆಲ್ ತಯಾರಿಸುವ ಘಟಕಕ್ಕೆ ಆಡಳಿತಾತ್ಮಕ ಮಂಜೂರು ದೊರೆತಿದ್ದರು ಹಣಕಾಸು ಮಂಜೂರಾತಿ ಮಾಡಿಸಲು ಅವಕಾಶವಿದ್ದರೂ ಜಿಲ್ಲೆಯ ಪಾರ್ಲಿಮೆಂಟ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರ ವಿಫಲವಾಗಿದೆ. ಜಿಲ್ಲೆಯಲ್ಲಿ ಚಿನ್ನದ ಗಣಿ ಕಾರ್ಖಾನೆ ಮುಚ್ಚಿದೆ ಬಿಎಂಎಲ್ ಕಾರ್ಖಾನೆ ಸಂಕಷ್ಟದಲ್ಲಿದೆ. ಇಂಥ ಸಂದರ್ಭದಲ್ಲಿ ರೈಲ್ವೆ ಕಾರ್ಖಾನೆ ಸ್ಥಾಪನೆ ಯಾಗುವುದು ತುಂಬಾ ಅವಶ್ಯಕವಾಗಿದ್ದು ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ರೈತ ಸಂಘದ ಮುಖಂಡರುಗಳಾದ ಅಬ್ಬಣಿ ಶಿವಪ್ಪ, ಕೋಟಿಗಾನಹಳ್ಳಿ ಗಣೇಶ್ ಗೌಡ, ಮಹಿಳಾ ಸಂಘದ ಮುಖಂಡರಾದ ವಿ ಗೀತಾ, ಕಾರ್ಮಿಕ ಸಂಘದ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಮಾವು ಬೆಳೆಗಾರರ ಸಂಘದ ಅಧ್ಯಕ್ಷರಾದ ನಿಲ್ತೂರು ಚಿನ್ನಪ್ಪ ರೆಡ್ಡಿ, ಬೆಲ್ಲಂ ಶ್ರೀನಿವಾಸ ರೆಡ್ಡಿ, ಕೆ ಪಿ ಆರ್ ಎಸ್ ಜಿಲ್ಲಾ ಅಧ್ಯಕ್ಷ ಟಿಎಂ ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ರೈತ ಸಂಘದ ಪದಾಧಿಕಾರಿಗಳಾದ ಬಂಗಾರಪೇಟೆ ಪಿ.ಶ್ರೀನಿವಾಸ್ ಮಾಲೂರು ಮುನಿಸ್ವಾಮಿ ಗೌಡ, ನಾರಾಯಣಸ್ವಾಮಿ, ಮುಳಬಾಗಿಲು ಪಿಆರ್ ಶಂಕ್ರಪ್ಪ, ಕೋಲಾರದ ನಾರಾಯಣ ರೆಡ್ಡಿ, ಕೆಜಿಎಫ್ ಕಣ್ಣೂರು ಸುರೇಶ್, ಶ್ರೀನಿವಾಸ್ ಪುರದ ಸೈಯದ್ ಫಾರೂಕ್ ಇತರರು ಭಾಗವಹಿಸಿದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೫ : ನಗರದ ಪತ್ರಕರ್ತರ ಭವನದಲ್ಲಿ ಕೆಪಿಆರ್‌ಎಸ್ ವತಿಯಿಂದ ಏರ್ಪಡಿಸಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ಹೈಕೋರ್ಟಿನ ಹಿರಿಯ ವಕೀಲ ಎಂ.ಶಿವಪ್ರಸಾದ್, ರೈತ ಮುಖಂಡರು ಭಾಗವಹಿಸಿದ್ದರು.