ನ್ಯೂಸ್

ಕೋಲಾರ ಜಿಲ್ಲೆಯಲ್ಲ ಎತ್ತಿನಹೊಳೆಯ ಯೋಜನೆಯ ನೀರು ಹರಿಸಲು ಪೈಪ್‌ಲೈನ್ ಅಳವಡಿಸಲು ಸರ್ಕಾರ ಅನುಮತಿ / ಕನಸ್ಸು ನನಸಾಗುತ್ತಿರುವ ಎತ್ತಿನಹೊಳೆ / ಜೂನ್ ತಿಂಗಳಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯ ಬಹುದಿನಗಳ ಬೇಡಿಕೆ ಮತ್ತು ಕನಸ್ಸಾಗಿದ್ದ ಎತ್ತಿನಹೊಳೆ ಯೋಜನೆ ನನಸಾಗುವ ಕಾಲ ಕೂಡಿಬಂದಿದ್ದು, ಕೋಲಾರ ಜಿಲ್ಲೆಯಲ್ಲಿ ಎತ್ತಿನಹೊಳೆ ನೀರು ಹರಿಸಲು ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.

ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಪಶ್ಚಿಮ ಘಟ್ಟಗಳಿಂದ ನೀರು ಹರಿಸಲು ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತರಲಾಯಿತು. ಆಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸದಾನಂದಗೌಡರು ಯೋಜನೆಗೆ ಅನುಮೋದನೆ ನೀಡಿದ್ದರು. ನಂತರ ಬದಲಾದ ಕಾಂಗ್ರೇಸ್ ಸರ್ಕಾರದಲ್ಲಿ ೨೦೧೪ರಲ್ಲಿ ಎತ್ತಿನಹೊಳೆ ಯೋಜನೆಗೆ ಭೂಮಿ ಪೂಜೆ ಮಾಡಿ, ಅನುದಾನವನ್ನು ಬಿಡುಗಡೆಗೊಳಿಸಲಾಯಿತು. ಕೋಲಾರ ಜಿಲ್ಲೆಯವರೇ ಆದ ರಮೇಶ್‌ಕುಮಾರ್ ಯೋಜನೆಯ ಬೆನ್ನೆಟ್ಟಿದ್ದರು.

ನಂತರ ೨೦೧೮ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದ್ದರೂ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಲಿಲ್ಲ. ಆದರೆ ಆಗಿನ ಸ್ಪೀಕರ್ ಆಗಿದ್ದ ರಮೇಶ್‌ಕುಮಾರ್ ಯೋಜನೆಯ ಬೆನ್ನುಬಿದ್ದು, ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಡೆಸಲು ಮುಂದಾದರು. ನಂತರ ಬದಲಾವಣೆಯಾದ ಬಿಜೆಪಿ ಸರ್ಕಾರದಲ್ಲಿ ಕಾಮಗಾರಿಗಳು ಮುನ್ನಡೆಯದೆ ತಟಸ್ಥ ಧೋರಣೆ ಕಂಡಿತು.

೨೦೨೩ರಲ್ಲಿ ಮತ್ತೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಯೋಜನೆಯನ್ನು ಮುಂದುವರೆಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ತಮ್ಮದೇ ಸರ್ಕಾರ ಇದ್ದರೂ ಮುಂದಾಗಲಿಲ್ಲ. ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎತ್ತಿನಹೊಳೆ ಯೋಜನೆಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಪೈಪ್‌ಲೈನ್ ಅಳವಡಿಸಲು ಒತ್ತಾಯಪಡಿಸಿದ್ದರು.

ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ರವರು ಶುಕ್ರವಾರ ಎತ್ತಿನಹೊಳೆ ಯೋಜನೆಯಲ್ಲಿ ಬರುವ ಕೋಲಾರ ಗುರುತ್ವ ಪೈಪ್‌ಲೈನ್ ಪ್ಯಾಕೇಜ್ ೩ ಮತ್ತು ೪ ಹಾಗೂ ಕೋಲಾರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ ೪ ಮತ್ತು ೫ ಹಾಗೂ ಶ್ರೀನಿವಾಸಪುರ ಫೀಡರ್ ಪೈಪ್‌ಲೈನ್ ಪ್ಯಾಕೇಜ್ ೧ ರಿಂದ ೩ರ ಕಾಮಗಾರಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿ, ಆದೇಶ ಹೊರಡಿಸಲಾಗಿದ್ದು, ಜೂನ್ ತಿಂಗಳಿನಲ್ಲಿ ಸದರಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲನಿಗಮ ನಿರ್ದೇಶಕರು ತಿಳಿಸಿದ್ದಾರೆ ಎನ್ನಲಾಗಿದೆ.

ಡಾ.ಪರಮಶಿವಯ್ಯನವರು ಸರ್ಕಾರಕ್ಕೆ ಮಂಡಿಸಿದ ವರದಿಯ ಹಿನ್ನಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಸಕಲೇಶ್ವರದ ಬಳಿ ಪ್ರಾರಂಭಿಸಿ ಅಲ್ಲಿಂದ ನೀರನ್ನು ಲಿಫ್ಟ್ ಮೂಲಕ ಗುರುತ್ವಾಕರ್ಷಣೆಯ ಅಡಿಯಲ್ಲ ಪೈಪ್‌ಲೈನ್ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ತರಲು ಸರ್ಕಾರ ಯೋಜನೆಯನ್ನು ಪ್ರಾರಂಭಿಸಿ ಕಾಮಗಾರಿಗಳು ಈಗಾಗಲೇ ಸಕಲೇಶ್ವರದ ಬಳಿ ಪೂರ್ಣಗೊಂಡು ನೀರು ಹಾಸನ ಜಿಲ್ಲೆಯ ತನಕ ಪೈಪ್‌ಲೈನ್ ಮೂಲಕ ಬರುತ್ತಿವೆ.

ಯೋಜನೆಯ ಉದ್ದೇಶ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಆಗಿದ್ದರೂ ರಮೇಶ್‌ಕುಮಾರ್ ರವರು ಕಳೆದ ಚುನಾವನೆಯಲ್ಲಿ ಪರಾಭವಗೊಂಡ ನಂತರ ಯೋಜನೆಯ ಕಾರ್ಯಗತದ ಬಗ್ಗೆ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮದೇ ಸರ್ಕಾರದಲ್ಲಿ ಮೌನವಹಿಸಿದ ಕಾರಣ ಹಿನ್ನಡೆ ಕಂಡಿತು.

೨೦೧೮ರ ಚುನಾವಣೆ ಮತ್ತು ೨೦೨೩ರ ಚುನಾವಣೆಯಲ್ಲಿ ಎತ್ತಿನಹೊಳೆ ಯೋಜನೆಯ ಬಗ್ಗೆ ಜೆಡಿಎಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಾ ನೀರೇ ಇಲ್ಲದ ಜಾಗದಲ್ಲಿ ಯೋಜನೆ ರೂಪಿಸಿದ್ದು, ಇದು ಸರ್ಕಾರ ಮತ್ತು ಜನಪ್ರತಿನಿಧಿಗಳು ದುಡ್ಡು ಹೊಡೆಯುವ ಸ್ಕೀಂ ಎಂದು ಅಪಪ್ರಚಾರ ನಡೆಸಿದರು. ಹಾಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಯೋಜನೆ ಸರಿಯಿಲ್ಲ. ಯೋಜನೆಯಲ್ಲಿ ದುಡ್ಡುಹೊಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ರಮೇಶ್‌ಕುಮಾರ್ ವಿರುದ್ಧ ಗುಡುಗಿದ್ದರು.

ಅವರೇ ಈ ಯೋಜನೆಯ ಕಾರ್ಯಗತದ ಬಗ್ಗೆ ಅವರ ೪೦ ವರ್ಷಗಳ ರಾಜಕಾರಣದಲ್ಲಿ ವಿಧಾನಸೌಧದಲ್ಲಿ ಧ್ವನಿ ಎತ್ತದೆ ಇದ್ದವರು ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲು ಗಟ್ಟಿಧ್ವನಿಯೆತ್ತಿ ಜಲಸಂಪನ್ಮೂಲ ಸಚಿವರನ್ನು ಒತ್ತಾಯಪಡಿಸಿದ್ದರು.

ಜ್ಞಾನೋದಯ :

ರಮೇಶ್‌ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೪೦ ವರ್ಷಗಳಿಂದ ಜಿದ್ದಾಜಿದ್ದಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಇಬ್ಬರಿಗೂ ವಯಸ್ಸಾಗುತ್ತಿದ್ದಂತೆ ಕ್ಷೇತ್ರಕ್ಕೆ ಏನಾದರೂ ಶಾಶ್ವತವಾದ ಕೆಲಸಗಳನ್ನು ಮಾಡಿಸಬೇಕೆಂದು ಇಬ್ಬರೂ ಮುಂದಾಗಿದ್ದಾರೆ. ರಮೇಶ್‌ಕುಮಾರ್ ರವರು ಎತ್ತಿನಹೊಳೆ ಜೊತೆಗೆ ಕೆ.ಸಿ.ವ್ಯಾಲಿ ನೀರು ಜಿಲ್ಲೆಗೆ ತಂದ ಕೀರ್ತಿ ಇದೆ. ಈಗ ಸ್ಥಗಿತಗೊಂಡಿದ್ದ ಎತ್ತಿನಹೊಳೆಗೆ ಚುರುಕುಗೊಳಿಸಲು ಹಾಲಿ ವೆಂಕಟಶಿವಾರೆಡ್ಡಿ ಮುಂದಾಗಿದ್ದಾರೆ. ಜೊತೆಗೆ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರಾಂಗಣ ತರಲು ಮುಂದಾಗಿದ್ದಾರೆ.

ಕೋಟ್

ಕೋಲಾರ ಜಿಲ್ಲೆಯ ಬಹುದಿನಗಳ ಬೇಡಿಕೆಯನ್ನು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ರವರು ನೆರವೇರಿಸಿದ್ದು, ಕೋಲಾರ ಜಿಲ್ಲೆಯ ಎಲ್ಲಾ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪೈಪ್‌ಲೈನ್ ಕಾಮಗಾರಿ ಜೂನ್ ತಿಂಗಳಿAದ ಪ್ರಾರಂಭಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲನಿಗಮ ನಿರ್ದೇಶಕರು ತಿಳಿಸಿದ್ದಾರೆ. ಎತ್ತಿನಹೊಳೆಯಿಂದ ಕುಡಿಯುವ ನೀರು ಜಿಲ್ಲೆಗೆ ಲಭ್ಯವಾದರೆ ನೀರಿನ ಅಭಾವ ಜಿಲ್ಲೆಯಲ್ಲಿ ನೀಗುತ್ತದೆ.

-ಜಿ.ಕೆ.ವೆಂಕಟಶಿವಾರೆಡ್ಡಿ, ಶ್ರೀನಿವಾಸಪುರ ಶಾಸಕ

ಚಿತ್ರ ೧೮ ಕೆ.ಎಲ್.ಆರ್. ೦೨ಎ : ಎತ್ತಿನಹೊಳೆಗೆ ಪೈಪ್‌ಲೈನ್ ಅಳವಡಿಸುವ ಚಿತ್ರ

ಚಿತ್ರ ೧೮ ಕೆ.ಎಲ್.ಆರ್. ೦೨ಎ : ಜಿ.ಕೆ.ವೆಂಕಟಶಿವಾರೆಡ್ಡಿ ಭಾವಚಿತ್ರ