ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯನ್ನು ನಶೆ ಮುಕ್ತ ಕೋಲಾರ ಮಾಡಲು ನಾವೆಲ್ಲರೂ ಪಣತೊಡಬೇಕು. ನಶೆಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕನಸಾಗಬೇಕು. ಒಂದು ಜಿಲ್ಲೆಯನ್ನು ನಶೆ ಮುಕ್ತ ಮಾಡಲು ಕಷ್ಟಸಾಧ್ಯ. ಆದರೆ ಎಲ್ಲರ ಸಹಕಾರದಿಂದ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಆಡಿಟೋರಿಯಂನಲ್ಲಿ ಗುರುವಾರ ಆಯೋಜಿಸಲಾಗಿದ್ದ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳು ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನವನ್ನಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ೧೪೦ ಕೋಟಿ ಜನಸಂಖ್ಯೆಯಲ್ಲಿ ೬೫ ಕೋಟಿ ಜನಸಂಖ್ಯೆಯಲ್ಲಿ ೩೫ ವರ್ಷಕ್ಕಿಂತ ಕಡಿಮೆ ಇರುವವರಿದ್ದಾರೆ. ಈ ದೇಶವನ್ನು ಕಟ್ಟಲು ಯುವಕರು ಸಮರ್ಥರಾಗಿದ್ದಾರೆ. ಇದರಲ್ಲಿ ಅನೇಕರು ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಅದನ್ನು ನಿರ್ಮೂಲನೆ ಮಾಡಲು ಜಿಲ್ಲೆಯ ಪ್ರತಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಸಮಿತಿ ಸ್ಥಾಪಿಸಲಾಗುತ್ತಿದೆ. ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ತಮ್ಮ ಕಾಲೇಜಿನ ಸುತ್ತಮುತ್ತ ನಡೆಯುವ ಅಹಿತಕರ ಘಟನೆಗಳು, ನಶೆಯಲ್ಲಿರುವಂತಹ ವ್ಯಕ್ತಿಗಳು ಕಂಡು ಬಂದ ತಕ್ಷಣ ಪೋಲೀಸರಿಗೆ ತಿಳಿಸಬೇಕು. ಆಂಟಿ ಡ್ರಗ್ಸ್ ಕಮಿಟಿಯಲ್ಲಿರುವ ಸದಸ್ಯರಿಗೆ ಮಾಹಿತಿ ನೀಡಿದರೆ ನಶೆಗೆ ತುತ್ತಾದವರಿಗೆ ಚಿಕಿತ್ಸೆ, ಕೌನ್ಸಿಲಿಂಗ್ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಬಗ್ಗೆ ಮನೆಗಳಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯ ಪ್ರತಿ ಮನೆಗಳಿಗೂ ಈ ವಿಚಾರ ತಲುಪಬೇಕು ಎನ್ನುವುದು ನಮ್ಮ ಆಶಯವಾಗಿದೆ. ಧನಾತ್ಮಕ ವಿಚಾರಗಳನ್ನು ಸಾರ್ವಜನಿಕರಿಗೆ ತಲುಪಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಪ್ರತಿ ಕಾಲೇಜಿನಲ್ಲಿ ಆಂಟಿ ಡ್ರಗ್ ಕಮಿಟಿಯನ್ನು ಸ್ಥಾಪಿಸುವ ಮೂಲಕ ನಶೆಮುಕ್ತ ಕೋಲಾರ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಐದು ಸಾವಿರ ಇತಿಹಾಸವಿರುವ ದೇಶದಲ್ಲಿ ಈಗ ಪ್ರಾರಂಭವಾಗುವ ಅಭಿಯಾನ ಇಡೀ ವರ್ಷ ಶಾಲೆ ಕಾಲೇಜುಗಳಲ್ಲಿ ಆರಂಭವಾಗುವ ಅಭಿಯಾನದಲ್ಲಿ ಶಾಲೆಯ ಮುಖ್ಯಸ್ಥರು ಉಪನ್ಯಾಸಕರು, ಶಿಕ್ಷಕರು ಜವಾಬ್ದಾರಿ ವಹಿಸಿಕೊಳ್ಳಬೇಕು. ಒಂದು ವರ್ಷಗಳ ಕಾಲ ಅಭಿಯಾನ ಅತ್ಯಂತ ಯಶಸ್ವಿಯಾಗಿ ಮಾಡುವ ಮೂಲಕ ಸಾರ್ವಜನಿಕರಿಗೆ ಸಂದೇಶ ಸಾರಬೇಕು ಎಂದರು.
ಮಾದಕದ್ರವ್ಯ ಸೇವನೆಯಿಂದ ಅಪರಾಧಗಳು ಮತ್ತು ಮೃತ್ಯುಗಳು ಶೂನ್ಯಕ್ಕೆ ತಲುಪಬೇಕು. ಡ್ರಗ್ಸ್ನಿಂದ ಬಳಲುತ್ತಿರುವವರನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಇ.ಓ. ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಅರಣ್ಯಾಧಿಕಾರಿ ಸರೀನಾ ಸಿಕ್ಕಲಿಗರ್, ಪೊಲೀಸರು, ಇಲ್ಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿತ್ರ ೨೬ ಕೆ.ಎಲ್.ಆರ್. ೦೫ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳು ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿ ರವರಿಂದ ಪ್ರತಿಜ್ಞೆ. ಎಸ್.ಪಿ.ಬಿ.ನಿಖಿಲ್, ಜಿಲ್ಲಾ ಅರಣ್ಯಾಧಿಕಾರಿ ಸರೀನಾ ಸಿಕ್ಕಲಿಗರ್ ಮುಂತಾದವರು ಇದ್ದರು.