ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೆ.ಜಿ.ಎಫ್. ಬಂಗಾರಪೇಟೆ ಈ ತಾಲ್ಲೂಕುಗಳು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊAಡಿದ್ದು, ಗಡಿಭಾಗದ ಬೆಟ್ಟಗುಡ್ಡಗಳ ಮೇಲೆ ಬೀಳುವ ಮಳೆಯ ನೀರು ಆಭಾಗದ ಕೆರೆಗಳು ತುಂಬಿ ಆಂಧ್ರಪ್ರದೇಶಕ್ಕೆ ಹರಿಯುತ್ತಿವೆ. ಆ ನೀರಿಗೆ ಅಣೆಕಟ್ಟು ನಿರ್ಮಿಸಿ. ನೀರು ಶೇಖರಣೆ ಮಾಡಿಕೊಂಡರೆ ಆಯಾ ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ.
ಬಂಗಾರಪೇಟೆ ಬಳಿಯ ಯರಗೋಳ್ ಡ್ಯಾಮ್ ನಿರ್ಮಿಸಿ ಅದರಿಂದ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಮತ್ತು ನಗರ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಅದೇ ರೀತಿ ಮುಳಬಾಗಿಲು, ಕೆ.ಜಿ.ಎಫ್. ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಗಡಿಭಾಗಗಳಲ್ಲಿರುವ ಬೆಟ್ಟಗುಡ್ಡಗಳಿಂದ ಮಳೆಗಾಲದಲ್ಲಿ ಆಂಧ್ರಪ್ರದೇಶಕ್ಕೆ ಹರಿದುಹೋಗುವ ನೀರನ್ನು ತಡೆದು ಡ್ಯಾಂಗಳನ್ನು ನಿರ್ಮಿಸಿ ಆಯಾ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಬಹುದು. ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಜನಪ್ರತಿನಿಧಿಗಳ ಇಚ್ಛಾಶಕ್ತಿಯು ಬೇಕಾಗುತ್ತದೆ.
ಶ್ರೀನಿವಾಸಪುರ ತಾಲ್ಲೂಕಿನ ಗಡಿಭಾಗವಾದ ರಾಯಲ್ಪಾಡು, ಕೂರಿಗೇಪಲ್ಲಿ, ಮುದಿಮಡುಗು, ಸೋಮಯಾಜಲಪಲ್ಲಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಂದ ಬೀಳುವ ಮಳೆ ನೀರು ಆಭಾಗದ ಕೆರೆಗಳು ತುಂಬಿ ಕಳೆದ ೩ ದಿನಗಳಿಂದ ಆಂಧ್ರಪ್ರದೇಶಕ್ಕೆ ಹರಿದುಹೋಗುತ್ತಿವೆ.
ತಾಲ್ಲೂಕಿನ ಮುದುಮಡುಗು ಸುತ್ತಮುತ್ತಲಿನ ಕೊಕ್ಕೇಮೂತಿ ಬೆಟ್ಟ, ಮುದಿಮಡುಗು ಬೆಟ್ಟ ಹಾಗೂ ಸೋಮಯಾಜಲಪಲ್ಲಿ ಬಳಿಯ ಓಬಳೇಶ್ವರ ಬೆಟ್ಟದ ಬೆಟ್ಟಗುಡ್ಡಗಳಿಂದ ಹರಿಯುವ ನೀರು ಆಂಧ್ರಪ್ರದೇಶಕ್ಕೆ ಹರಿಯುವಂತಾಗಿದೆ.
ರಾಯಲ್ಪಾಡು ಭಾಗದ ಬೆಟ್ಟಗುಡ್ಡಗಳ ನಡುವೆ ಯರಗೋಳ್ ಡ್ಯಾಂ ಮಾದರಿಯಲ್ಲಿ ಅಣೆಕಟ್ಟು ನಿರ್ಮಿಸಿ ನೀರು ಶೇಖರಣೆ ಮಾಡಿಕೊಂಡರೆ ಶ್ರೀನಿವಾಸಪುರ ತಾಲ್ಲೂಕು ಮತ್ತು ಪಕ್ಕದ ಚಿಂತಾಮಣಿ ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಗಳಿಗು ಆಗುವಷ್ಟು ನೀರು ಶೇಖರಣೆ ಮಾಡಿಕೊಳ್ಳಬಹುದು. ಪ್ರತಿವರ್ಷ ಮಳೆಗಾಲದಲ್ಲಿ ನೀರು ಆಂಧ್ರಪ್ರದೇಶಕ್ಕೆ ಹೋಗುತ್ತಿವೆ. ಈ ನೀರನ್ನು ಆಂದ್ರಪ್ರದೇಶದ ಮದನಪಲ್ಲಿಯವರು ಬಳಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಎತ್ತಿನಹೊಳೆ ಯೋಜನೆ ಪ್ರಾರಂಭಗೊAಡು ಸುಮಾರು ೧೫ ವರ್ಷಗಳು ಕಳೆದರು ಇದುವರೆವಿಗೂ ಕೋಲಾರ ಜಿಲ್ಲೆಗೆ ನೀರು ತರಲು ಸಾಧ್ಯವಾಗಿಲ್ಲ. ಕೆ.ಸಿ.ವ್ಯಾಲಿ ನೀರು ೨ನೇ ಹಂತದಲ್ಲಿ ಶುದ್ಧೀಕರಿಸಿ ಜಿಲ್ಲೆಯ ಕೆಲವು ತಾಲ್ಲೂಕಿನ ಕೆರೆಗಳಿಗೆ ಹರಿಸಲಾಗುತ್ತಿದೆ.
ಎತ್ತಿನಹೊಳೆಗೆ ೩೩ ಸಾವಿರ ಕೋಟಿ ರೂ.ಗಳು ಮತ್ತು ಕೆ.ಸಿ.ವ್ಯಾಲಿಗೆ ೪ ಸಾವಿರ ಕೋಟಿ ರೂ.ಗಳು ಇದುವರೆವಿಗೂ ಸರ್ಕಾರ ಖರ್ಚು ಮಾಡಿದೆ. ಆದರೆ ಕೆ.ಸಿ.ವ್ಯಾಲಿಯಿಂದ ಅಂತರ್ಜಲ ವೃದ್ಧಿಗೆ ಮಾತ್ರ ಸಾಧ್ಯವಾಗುತ್ತಿದೆ. ಎತ್ತಿನಹೊಳೆಯನ್ನು ನೋಡಬೇಕಾದರೆ ಇನ್ನೂ ಎಷ್ಟುವರ್ಷ ಕಾಯಬೇಕೋ ಗೊತ್ತಿಲ್ಲ. ನಮ್ಮ ಜಿಲ್ಲೆಯ ನೀರನ್ನೇ ನಾವು ಸಂರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಬೀಳುವ ಮಳೆಯ ನೀರನ್ನು ಸಂರಕ್ಷಿಸಿಕೊAಡರೆ ೩ ತಾಲ್ಲೂಕುಗಳಿಗೂ ಕುಡಿಯುವ ನೀರು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿ ಬಳಿಯ ಓಬಳೇಶ್ವರ ಬೆಟ್ಟದ ನೀರು ಸಹ ಮುದಿಮಡಗು ಬೆಟ್ಟಗಳ ಸಾಲಿಗೆ ಸೇರಿ ಅವು ಆಂಧ್ರಕ್ಕೆ ಹರಿಯುತ್ತಿವೆ. ಆ ನೀರನ್ನು ಶೇಖರಣೆ ಮಾಡಿಕೊಂಡರೆ ರೋಣೂರು ಕೆರೆಯ ಮೂಲಕ ಶ್ರೀನಿವಾಸಪುರ ಪಟ್ಟಣದ ದೊಡ್ಡ ಕರೆಗೆ ತಂದು ಪಟ್ಟಣಕ್ಕೆ ಕುಡಿಯುವ ನೀರು ನೀಡಲು ಸಾಧ್ಯವಗುತ್ತದೆ. ಸುಮಾರು ಬಾರಿ ಆ ನೀರನ್ನು ತರಲು ಪ್ರಯತ್ನಗಳು ನಡೆದು ಅವು ವಿಫಲಗೊಂಡಿದೆ.
ಮುಳಬಾಗಿಲು ಮತ್ತು ಕೆ.ಜಿ.ಎಫ್.ತಾಲ್ಲೂಕಿನ ಗಡಿಭಾಗದಲ್ಲಿಯೂ ಬೆಟ್ಟಗುಡ್ಡಗಳು ಇರುವುದರಿಂದ ಆಭಾಗಗಳ ಜನರು ನೀರಿನ ಜಲಮೂಲಗಳನ್ನು ಹುಡುಕಿ ಡ್ಯಾಂಗಳನ್ನು ನಿರ್ಮಿಸಿ ಆ ಭಾಗಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಿದೆ ಎಂಬುದು ನೀರಾವರಿ ತಜ್ಞರ ಮಾತಾಗಿದೆ. ದೂರದ ನೀರಿಗಾಗಿ ಕಾಯುವ ಬದಲು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಒಂದಾಗಿ ಗಡಿಭಾಗದ ನೀರಿನ ಜಲಮೂಲಗಳನ್ನು ಕಂಡುಹಿಡಿದು ಮಳೆಗಾಲದ್ಲಿ ಆಂಧ್ರಪ್ರದೇಶಕ್ಕೆ ನೀರಿಗೆ ಡ್ಯಾಂಗಳನ್ನು ನಿಮಾರ್ಣನ ಮಾಡಿ ನೀರನ್ನು ರಕ್ಷಿಕೊಳ್ಳಬೇಕೆಂದು ಆ ಭಾಗದ ರೈತರ ಒತ್ತಾಯವೂ ಆಗಿದೆ.
ಬಾಕ್ಸ್
ಶ್ರೀನಿವಾಪುರ ತಾಲ್ಲೂಕಿನ ಓಬಳೇಶ್ವರ ಬೆಟ್ಟ ಮತ್ತು ಮುದಿಮಡಗು ಸಮೀಪದಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಆಂಧ್ರ ಸರ್ಕಾರ ತಕರಾರು ತೆಗೆದು ಜಲಮೂಲಗಳು ಹರಿಯಲು ಬಿಡಬೇಕು. ತಡೆಯಬಾರದು ಎಂದು ಕ್ಯಾತೆ ತೆಗೆದಿತ್ತು. ಆಗ ಅದನ್ನು ಕೈಬಿಡಲಾಗಿತ್ತು. ಈಗ ಆಂಧ್ರಪ್ರದೇಶದ ಮದನಪಲ್ಲಿಗೆ ಕೃಷ್ಣಾ ನದಿ ನೀರು ಹರಿಯುತ್ತಿರುವುದರಿಂದ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸಿ ಯರಗೋಳ್ ಮಾದರಿಯಲ್ಲಿ ೩ ತಾಲ್ಲೂಕುಗಳಲ್ಲಿಯೂ ಬೆಟ್ಟಗಳಿಂದ ಹರಿದುಹೋಗುವ ನೀರಿಗೆ ಡ್ಯಾಂಗಳನ್ನು ನಿರ್ಮಾಣ ಮಾಡಿ ಆ ಭಾಗಕ್ಕೆ ನೀರು ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್
ರಾಯ್ಲಪಾಡು ಸುತ್ತಮುತ್ತಲ ಬೆಟ್ಟಗಳ ಮೇಲೆ ಬೀಳುವ ಮಳೆಯ ನೀರು ಆ ಭಾಗದ ಕೆರೆಗಳು ತುಂಬಿ ಆಂಧ್ರಕ್ಕೆ ನೀರು ಸೇರುತ್ತಿವೆ. ಅದನ್ನು ಯರಗೋಳ್ ಮಾದರಿಯಲ್ಲಿ ಡ್ಯಾಂ ನಿರ್ಮಾಣ ಮಾಡಿ, ನೀರು ಶೇಖರಣೆ ಮಾಡಿಕೊಂಡರೆ ಶ್ರೀನಿವಾಸಪುರ ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಸರ್ಕಾರ ಚಿಂತನೆ ಮಾಡಬೇಕಾಗಿದೆ. ಚಿಕ್ಕ ಚಿಕ್ಕ ಡ್ಯಾಂಗಳನ್ನು ನಿರ್ಮಾಣ ಮಾಡಲು ಮುಂದಾದ ಸಂದರ್ಭದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕು ಆಡಳಿತ ಅಡಚಣೆ ಮಾಡಿದೆ ಆದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ವಿವಾದ ಇತ್ಯರ್ಥಪಡಿಸಿ ಡ್ಯಾಂಗಳನ್ನು ನಿರ್ಮಿಸಿದರೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ.
-ಸಂಜಯ್‌ರೆಡ್ಡಿ, ಶ್ರೀನಿವಾಸಪುರ
ಚಿತ್ರ ೨೧ ಕೆ.ಎಲ್.ಆರ್. ೦೨ : ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಸುತ್ತಮುತ್ತಲಿನ ಬೆಟ್ಟಗಳ ನೀರು ಆಂಧ್ರಪ್ರದೇಶಕ್ಕೆ ಕರಿಯುತ್ತಿರುವುದು.
ಚಿತ್ರ ೨೧ ಕೆ.ಎಲ್.ಆರ್. ೦೨ಎ : ಸಂಜಯರೆಡ್ಡಿ ಭಾವಚಿತ್ರ