ನ್ಯೂಸ್

ಕೋಲಾರ ಜಿಲ್ಲೆ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಬೇಕು / ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು / ಬಾಲ್ಯ ವಿವಾಹ ಮುಕ್ತ ಗ್ರಾ.ಪಂ. ಎಂದು ಘೋಷಣೆಯಾದರೆ ಸರ್ಕಾರದಿಂದ ಬಹುಮಾನ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಬಾಲ್ಯ ವಿವಾಹ ನಾಗರಿಕ ಸಮಾಜಕ್ಕೆ ದೊಡ್ಡ ಸವಾಲಾಗಿದೆ, ಅದನ್ನು ತಡೆಯಬೇಕು. ಕೋಲಾರ ಜಿಲ್ಲೆಯಲ್ಲಿ ಬಾಲ್ಯವಿವಾಹ ಮುಕ್ತವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೋಲಾರ ವತಿಯಿಂದ ಸೋಮವಾರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಗು ನಿರಂತರವಾಗಿ ಶಾಲೆಗೆ ಬಾರದೆ ಇರುವ ಸಂದರ್ಭದಲ್ಲಿ ಶಿಕ್ಷಕರು ಅವರ ಪೋಷಕರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ತಾವು ಅವರ ಮನೆಗೆ ಹೋಗಿ ಬಾಲ್ಯ ವಿವಾಹ ಆಗಿದೆಯಾ ಎಂದು ತಿಳಿದು ಅವರ ವಿರುದ್ಧ ದೂರು ದಾಖಲು ಮಾಡಬೇಕಾಗುತ್ತದೆ ಎಂದರು.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳು ಬಾಲ್ಯ ವಿವಾಹಗಳನ್ನು ತಡೆದು, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ನಮ್ಮ ಗ್ರಾಮ ಪಂಚಾಯಿತಿ ಬಾಲ್ಯ ವಿವಾಹ ಮುಕ್ತವಾಗಿದೆ ಎಂದು ಘೋಷಣೆ ಮಾಡಿದರೆ ಅಂತಹ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ವತಿಯಿಂದ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಮೇಲ್ವಿಚಾರಿಕಿಯರು, ಶಾಲೆಯ ಮುಖ್ಯ ಶಿಕ್ಷಕರು, ಆರೋಗ್ಯ ನಿರೀಕ್ಷಕರು, ಎಲ್ಲಾ ಕಂದಾಯ ಅಧಿಕಾರಿಗಳು ಗ್ರಾಮ ವ್ಯಾಪ್ತಿಯ ಬಾಲ್ಯ ವಿವಾಹ ನಿಷೇಧ ಅಧಿಕಾರಾಧಿಕಾರಿಗಳಾಗಿರುತ್ತಾರೆ. ಬಾಲ್ಯ ವಿವಾಹ ತಡೆಯುವ ಅಧಿಕಾರ ಈ ಎಲ್ಲಾ ಅಧಿಕಾರಿಗಳಿಗೂ ಇರುತ್ತದೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹಗಳು ನಡೆದರೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಎಚ್ಚರಿಕೆ ನೀಡಿದರಲ್ಲದೆ ಅಧಿಕಾರಿಗಳು ಒಗ್ಗಟ್ಟಿನಿಂದ ಒಂದು ಆಂದೋಲನ ಚಳುವಳಿಯಂತೆ ಮಾಡಿ ಬಾಲ್ಯವಿವಾಹ ತಡೆಯುವ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.

ಬಾಲ್ಯವಿವಾಹದಲ್ಲಿ ಪಾಲ್ಗೊಂಡರೆ ಶಿಕ್ಷೆ:

ಬಾಲ್ಯ ವಿವಾಹ ಮಾಡುವವರಿಗೆ ಮತ್ತು ಮಾಡಿಕೊಳ್ಳುವವರಿಗೆ ಮಾತ್ರ ಶಿಕ್ಷೆಗೆ ಒಳಗಾಗುವುದಿಲ್ಲ. ಅಂತಹ ಮದುವೆಯಲ್ಲಿ ಪಾಲ್ಗೊಂಡರೆ ಅಥವಾ ಪ್ರೋತ್ಸಾಹ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರನ್ನು ಸಮಾನರಾಗಿ ಕಾಣದೆ ಇರುವುದು, ಹೆಣ್ಣು ಮಕ್ಕಳ ಭ್ರೂಣಹತ್ಯೆ ಮಾಡುವುದು, ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆಯಾಗುತ್ತಾರೆ ಎಂದು ಬೇಗ ಮದುವೆ ಮಾಡುವುದು. ಇದರಿಂದಾಗಿ ಬಾಲ್ಯವಿವಾಹಗಳು ಹೆಚ್ಚಾಗುತ್ತಿರಬಹುದು. ಆದ್ದರಿಂದ ನಿರಂತರವಾಗಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎಲ್ಲಾ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧಕ್ಕೆ ಕೈಜೋಡಿಸಿ ಕಾಯ್ದೆಯನ್ನು ನೂರಕ್ಕೆ ನೂರರಷ್ಟು ಅನುಷ್ಠಾನ ಗೊಳಿಸಬೇಕಾಗಿದೆ ಎಂದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಲ್ಲಿ ಶಿಕ್ಷಣ ಇಲಾಖೆಯು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮಗಳಲ್ಲಿ ಯಾರಿಗೂ ತಿಳಿಯದೆ ಕೇವಲ ಐದು ದಿನಗಳಲ್ಲಿ ವಿವಾಹವನ್ನು ಮಾಡಿ ಮುಗಿಸುತ್ತಾರೆ. ಆದ್ದರಿಂದ ಶಾಲೆಯಲ್ಲಿ ಶಿಕ್ಷಕರು ಉತ್ತಮ ಬಾಂಧವ್ಯದಿAದ ಇದ್ದು, ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಪೋಷಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿರಬೇಕು. ಕಾರ್ಯಾಗಾರದಲ್ಲಿ ತಿಳಿದುಕೊಳ್ಳುವ ಪ್ರತಿಯೊಂದು ವಿಷಯವನ್ನು ತಳಮಟ್ಟದಲ್ಲಿರುವವರಿಗೂ ತಿಳಿಸಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ನಿಖಿಲ್ ಮಾತನಾಡಿ, ಪೋಕ್ಸೋ ಬಾಲ್ಯವಿವಾಹ ಅಪರಾಧಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಪ್ರತಿವರ್ಷ ಬಾಲ್ಯವಿವಾಹ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ ಮಾತನಾಡಿ, ಕೋಲಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳ ಮೂಲಕ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಮನೆಗಳಲ್ಲಿರುವ ಪೋಷಕರಿಗೆ ಬಾಲ್ಯ ವಿವಾಹ ಕುರಿತು ಅರಿವು ಮೂಡಿಸಬೇಕು. ಏನಾದರೂ ಬಾಲ್ಯ ವಿವಾಹ ಮಾಡುವುದು, ಮಾಡಿಸುವುದು ಅಂತಹ ಮದುವೆಗಳಲ್ಲಿ ಪಾಲ್ಗೊಳ್ಳುವುದು ಮಾಡಿದರೆ ಅಂತಹವರ ವಿರುದ್ಧ ದೂರನ್ನು ದಾಖಲಿಸಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೪ : ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ. ಸಿ.ಇ.ಓ. ಪ್ರವೀಣ್‌ಬಾಗೇವಾಡಿ, ಎಸ್.ಪಿ. ಬಿ.ನಿಖಿಲ್ ಮುಂತಾದವರು ಇದ್ದರು.