ನ್ಯೂಸ್

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ / ಎರಡೂ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಂತಸ / ಪ್ರಗತಿಯಲ್ಲಿರುವ ಕಾಮಗಾರಿಗಳು ಮುಂದುವರೆಯುತ್ತವೆ / ವಿಭಜನೆಗೆ ಸರ್ಕಾರ ಸಹಕಾರ ನೀಡಿದೆ / ಕೆ.ವೈ.ನಂಜೇಗೌಡ

ವಿಜಯವಾಣಿ ಸುದ್ದಿಜಾಲ ಕೋಲಾರ

ಬಹುದಿನಗಳ ಕನಸ್ಸಾಗಿದ್ದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಗೆ ಸರ್ಕಾರದಿಂದ ಮನ್ನಣೆ ಸಿಕ್ಕಿದ್ದು, ಶುಕ್ರವಾರ ಸಂಜೆ ವೇಳೆಗೆ ಈಗಿನ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಳ್ಳಲಿದೆ. ಶನಿವಾರದಿಂದ ಆಡಳಿತಾಧಿಕಾರಿ ನೇಮಕವಾಗುವ ಸಾಧ್ಯತೆ ಇದ್ದು, ಕೋಲಾರ ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟಗಳಿಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಕ ಮಾಡಲಿದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಕೋಲಾರ ಚಿಕ್ಕಬಳ್ಳಾಪುರದ ಹಾಲು ಒಕ್ಕೂಟದ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಕಳೆದ ಐದು ವರ್ಷಗಳ ನನ್ನ ಆಡಳಿತಾವಧಿಯಲ್ಲಿ ಒಕ್ಕೂಟವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸರ್ಕಾರ ನೇಮಕ ಮಾಡುವ ಆಡಳಿತಾಧಿಕಾರಿಗಳು ಮುಂದುವರೆಸಿಕೊAಡು ಹೋಗಲಿದ್ದಾರೆ. ಆಡಳಿತಾಧಿಕಾರಿಗಳು ನೇಮಕಗೊಂಡ ನಂತರ ವಿಭಜನೆಗೊಂಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ರಾಜಣ್ಣ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಹಾಗೂ ಎರಡೂ ಜಿಲ್ಲೆಯ ಶಾಸಕರ ಮತ್ತು ಎರಡೂ ಜಿಲ್ಲೆಯ ಆಡಳಿತ ಮಂಡಳಿಯ ನಿರ್ದೇಶಕರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಹಾಲು ಉತ್ಪಾದಕರ ಸಹಕಾರದಿಂದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಗೆ ಸಹಕಾರ ದೊರೆತಿದೆ ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ತರಾತುರಿಯಲ್ಲಿ ಒಕ್ಕೂಟವನ್ನು ವಿಭಜನೆ ಮಾಡಲು ಅವೈಜ್ಞಾನಿಕ ನೀತಿಯನ್ನು ಅನುಸರಿಸಿದ ಕಾರಣ ನ್ಯಾಯಾಲಯ ಮೆಟ್ಟಿಲೇರಬೇಕಾಯಿತು. ನಂತರ ವೈಜ್ಞಾನಿಕವಾಗಿ ಎರಡು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಯಲ್ಲಿ ವಿಭಜನೆಗೆ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಜೊತೆಗೆ ಈಗಿನ ಸರ್ಕಾರದಿಂದಲೂ ವಿಭಜನೆಗೆ ಮನ್ನಣೆ ಸಿಕ್ಕಿದೆ. ನ್ಯಾಯಾಲಯದಿಂದ ಶುಕ್ರವಾರ ಸಂಜೆಯೊಳಗಾಗಿ ವಿಭಜನೆ ಆದೇಶ ಹೊರ ಬೀಳಲಿದೆ ಎಂದರು.

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಹಾಗೂ ನನ್ನ ೫ ವರ್ಷದ ಅಧ್ಯಕ್ಷರ ಅವಧಿಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಪ್ರಗತಿಯ ಹಾದಿಯಲ್ಲಿ ನಡೆಸಲಾಗುತ್ತಿದೆ. ೧೮೫ ಕೋಟಿ ರೂ.ಗಳ ವೆಚ್ಚದಲ್ಲಿ ೭.೫ ಲಕ್ಷ ಲೀ. ಸಾಮರ್ಥ್ಯದ ಎಂ.ವಿ.ಕೆ ಗೋಲ್ಡನ್ ಡೈರಿ ಸ್ಥಾಪನೆ ಮಾಡಲಾಗುತ್ತಿದೆ. ೨ ಕೋಟಿ. ರೂ.ಗಳ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಚಿಂತಾಮಣಿಯಲ್ಲಿ ೫೫ ಕೋಟಿ ವೆಚ್ಚದ ಐಸ್‌ಕ್ರೀಂ ಉತ್ಪಾದನಾ ಘಟಕ ಹಾಗೂ ಬೆಂಗಳೂರಿನಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಸತಿ ನಿಲಯ ಪ್ರಾರಂಭ, ಚಿಕ್ಕಬಳ್ಳಾಪುರ ಮೆಗಾ ಡೈರಿಯಲ್ಲಿ ೧೩೦ ಕೋಟಿ ರೂ.ಗಳ ವೆಚ್ಚದಲ್ಲಿ ೭.೫ ಲೀ. ಸಾಮರ್ಥ್ಯ ಸ್ಯಾಚೆಟ್ ಹಾಲು ಉತ್ಪಾದನಾ ಘಟಕ ಸ್ಥಾಪನೆ ಕಾಮಗಾರಿಗಳು ನಡೆಯುತ್ತಿವೆ ಎಂದರು.

ನನ್ನ ಐದು ವರ್ಷದ ಅಧ್ಯಕ್ಷರ ಅವಧಿಯಲ್ಲಿ ಒಕ್ಕೂಟವನ್ನು ಪ್ರಗತಿಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಹಾಗೂ ಹಾಲು ಉತ್ಪಾದಕರ ಸಂಪೂರ್ಣ ಸಹಕಾರ ನೀಡಿದ ಕಾರಣ ಹಾಲು ಉತ್ಪಾದಕರಿಗೆ ಅನೇಕ ಯೋಜನೆಗಳು ಹಾಗೂ ಹಾಲು ಉತ್ಪಾದಕರ ನೂತನ ಕಟ್ಟಡಗಳ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಯಿತು.

ರಾಜ್ಯದ ೧೨ ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಲಾಭ ಸೇರಿದಂತೆ ಪ್ರಗತಿಯಲ್ಲಿ ನಂ.೧ ಸ್ಥಾನವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಹಾಗೂ ಮಂಗಳೂರು ಹಾಲು ಒಕ್ಕೂಟದ ನಂತರ ರೈತರಿಗೆ ಹಾಲಿಗೆ ಹೆಚ್ಚಿನ ಹಣವನ್ನು ನೀಡುತ್ತಿರುವುದು ಕೋಲಾರ ಚಿಕ್ಕಬಳ್ಳಾಪುರ ಒಕ್ಕೂಟದಲ್ಲಿ ಮಾತ್ರ ಎಂದರು.

ಒಕ್ಕೂಟ ಬೆಳೆದು ಬಂದ ದಾರಿ :

೧೯೮೭ ರಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ವಿಭಜನೆಗೊಂಡು ಕೋಲಾರ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾದ ನಂತರ ೨೦೦೮ ರಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಒಕ್ಕೂಟ ಎಂದು ನಾಮಕರಿಸಲಾಯಿತು.

ಕೇವಲ ೪೬೦ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ೧.೫೭ ಲಕ್ಷ ಲೀ. ಹಾಲು ಶೇಖರಣೆಗೊಂಡು ಪ್ರಾರಂಭಗೊAಡ ಒಕ್ಕೂಟ ಸೆ. ೨೦೨೪ರ ವೇಳೆಗೆ ೧೯೩೭ ಸಂಘಗಳ ೧೧.೬೭ ಲಕ್ಷ ಕೆ.ಜಿ ಹಾಲು ಶೇಖರಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ೨೩೬ ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಒಕ್ಕೂಟ ಆರಂಭದಲ್ಲಿ ೮ ಕೋಟಿ ೫೬ ಲಕ್ಷ ಷೇರು ಬಂಡವಾಳ ಮಾತ್ರ ವರ್ಗಾವಣೆಗೊಂಡಿತ್ತು. ೨೦೨೩-೨೪ರ ಅಂತ್ಯಕ್ಕೆ ೭೬.೦೮ ಕೋಟಿ ಷೇರು ಬಂಡವಾಳ ಆಗಿತ್ತು. ಈಗ ವಿಭಜನೆಗೊಂಡಿರುವುದರಿAದ ಷೇರು ಬಂಡವಾಳದಲ್ಲಿ ಶೇ.೫೫ ರಷ್ಟು ಕೋಲಾರ ಮತ್ತು ಶೇ.೪೫ ಚಿಕ್ಕಬಳ್ಳಾಪುರ ಷೇರು ಬಂಡವಾಳ ಹಣ ವರ್ಗಾವಣೆ ಆಗಬೇಕಾಗುತ್ತದೆ.

ಬಾಕ್ಸ್

ಸಂಸದ ಕೆ.ಸುಧಾಕರ್ ರವರ ಒತ್ತಾಸೆಯ ಮೇರೆಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾಗಲಿದೆ. ಅವರ ಆತುರದ ತೀರ್ಮಾನದಿಂದ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ನಮ್ಮ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಭಜನೆಗೆ ಇದ್ದ ಅಡೆ ತಡೆಗಳನ್ನು ನಿವಾರಣೆ ಮಾಡಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸಿದ ನಂತರ ವಿಭಜನೆಗೆ ಅನುಕೂಲವಾಯಿತು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಕೋಟ್

ನನ್ನ ಅವಧಿಯಲ್ಲಿ ಅಭಿವೃದ್ಧಿಗೆ ಮನ್ನಣೆ ಸಿಕ್ಕಿತ್ತು. ಆದರಿಂದ ಖುಷಿಯೂ ಆಗಿದೆ. ನೇಮಕಾತಿ ಸಂದರ್ಭದಲ್ಲಿ ಇ.ಡಿ.ದಾಳಿಯಿಂದ ನೋವು ಉಂಟಾಗಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ.

-ಕೆ.ವೈ.ನಂಜೇಗೌಡ, ಅಧ್ಯಕ್ಷರು.

ಕೋಟ್

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಕೆ.ವೈ.ನಂಜೇಗೌಡ ಶಾಸಕರು ಆಗಿರುವುದರಿಂದ ಕೋಲಾರ ಚಿಕ್ಕಬಳ್ಳಾಪುರ ಒಕ್ಕೂಟವನ್ನು ಅಭಿವೃದ್ದಿಪಡಿಸಲು ಸಾಧ್ಯವಾಯಿತು. ಸರ್ಕಾರದಿಂದ ಪ್ರಭಾವಗೊಳಿಸಿ ಅನುದಾನ ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು.

-ಕಾಡೇನಹಳ್ಳಿ ನಾಗರಾಜ್, ನಿರ್ದೇಶಕರು

ಪತ್ರಿಕಾಗೋಷ್ಟಿಯಲ್ಲಿ ಕೋಚಿಮುಲ್ ನಿರ್ದೇಶಕರಾದ ಹನುಮೇಶ್, ಡಿ.ವಿ.ಹರೀಶ್, ಕಾಂತರಾಜು, ವೇದ, ಅಶ್ವತ್ಥನಾರಾಯಣ, ಎಂ.ಡಿ.ಗೋಪಾಲಮೂರ್ತಿ ಮುಂತಾದವರಿದ್ದರು.

ಚಿತ್ರ ೨೫ ಕೆ.ಎಲ್.ಆರ್. ೦೧ : ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಕಾಂತರಾಜು, ಹನುಮೇಶ್, ಡಿ.ವಿ.ಹರೀಶ್ ಮುಂತಾದವರಿದ್ದರು.