ವಿಜಯವಾಣಿ ಸುದ್ದಿಜಾಲ ಕೋಲಾರ.
ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೆ ನಲ್ಲಿ ಮೂಲಕ ನೀರನ್ನು ನೀಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ಶುದ್ದ ಕುಡಿಯುವ ನೀರಿನ ಮೂಲಗಳಿಲ್ಲದ ಕಾರಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರ್ನಾಟಕದ ಮೂಲವಾಗಿ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ಕೃಷ್ಣ ನದಿ ನೀರನ್ನು ಆಂಧ್ರದ ಗಡಿಗೆ ಹಂಚಿಕೊAಡಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಶುದ್ದ ನೀರನ್ನು ಹರಿಸಿ ಎಂದು ಸಂಸದ ಮಲ್ಲೇಶ್ ಬಾಬು ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಲೋಕಸಭಾ ಅಧಿವೇಶನದಲ್ಲಿ ಬುಧವಾರ ಜಿಲ್ಲೆಯ ನೀರಾವರಿ ಸಮಸ್ಯೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಅವರು ಬಯಲು ಸೀಮೆ ಜಿಲ್ಲೆಗಳಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ನೀರಾವರಿ ಮೂಲಗಳಿಲ್ಲದ ಕಾರಣ ರಾಜ್ಯ ಸರ್ಕಾರ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಶುದ್ದೀಕರಿಸಿ ಕೆ.ಸಿ ವ್ಯಾಲಿ ಮತ್ತು ಎನ್ ಹೆಚ್ ವ್ಯಾಲಿ ಯೋಜನೆಗಳ ಮೂಲಕ ಹರಿಸಲಾಗುತ್ತಿರುವ ನೀರಿನಿಂದ ಮಹಿಳೆಯರು ಮತ್ತು ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಿಧಾನವಾಗಿ ಬೆಳೆಗಳು ಗುಣಮಟ್ಟವನ್ನು ಕಳೆದುಕೊಳ್ಳುತ್ತಿವೆ. ಹಾಗಾಗಿ ಜಿಲ್ಲೆಗೆ ಶುದ್ದ ನೀರಿನ ಅವಶ್ಯಕತೆ ಇದೆ ಎಂದರು.
ಬೆAಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ದ ನೀರನ್ನು ಹರಿಸುವ ಮಹತ್ವಾಕಾಂಕ್ಷೇ ಯೋಜನೆಯಾಗಿ ರಾಜ್ಯ ಸರ್ಕಾರ ೨೩ ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದ ಕಳೆದ ೧೦ ವರ್ಷಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದ್ದು ಬಯಲು ಸೀಮೆ ಜಿಲ್ಲೆಗಳಿಗೆ ನೀರನ್ನು ಹರಿಸುತ್ತಿಲ್ಲ ಆದ್ದರಿಂದ ಇದೊಂದು ವಿಫಲ ಯೋಜನೆಯಾಗಿದೆ ಎಂದರು.
ಕೋಲಾರ ಜಿಲ್ಲೆ ರೇಷ್ಮೆ, ಹಾಲು, ಮಾವು ಮತ್ತು ಟೊಮೆಟೊಗಳ ನಾಡು ಎಂದು ಜನಪ್ರಿಯವಾಗಿದೆ. ಇವುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಟ್ಯಾಂಕ್‌ಗಳನ್ನು ಹೊಂದಿದ್ದು, ಮುಖ್ಯವಾಗಿ ೨೪೭೯ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ಕೆರೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ರೈತರು ಸಂಪೂರ್ಣವಾಗಿ ಅಂತರ್ಜಲವನ್ನು ಅವಲಂಬಿಸಿದ್ದಾರೆ. ಕೃಷಿ ಮತ್ತು ಸಂಬAಧಿತ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಯಾವುದೇ ದೀರ್ಘಕಾಲಿಕ ನೀರಾವರಿ ಮೂಲಗಳು ಇಲ್ಲ. ಇಡೀ ಜಿಲ್ಲೆಯನ್ನು "ಅಂತರ್ಜಲದ ಅತಿಯಾದ ಉಳುಮೆ" ಎಂದು ವರ್ಗೀಕರಿಸುವ ಮೂಲಕ ಇಡೀ ಜಿಲ್ಲೆ ಅಂತರ್ಜಲ ಸವಕಳಿಯ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ.
ಕಳೆದ ೨೦೦೫-೦೬ ರಿಂದ ಇಲ್ಲಿಯವರೆಗೆ ಜಿಲ್ಲೆಯು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದು ರೈತರು ಆರಂಭಿಕ ಬಿತ್ತನೆ ಮತ್ತು ಬೆಳವಣಿಗೆಯ ಹಂತದಲ್ಲಿಯೂ ಸಹ ವಿವಿಧ ಬೆಳೆ ನಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಆದ್ದರಿಂದ ರೈತರು ಒಣ ಕೃಷಿಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಹರಿಯುವ ಕೃಷ್ಣ ನದಿಯ ನೀರು ಆಂಧ್ರಪ್ರದೇಶಕ್ಕೆ ಹರಿಯುತ್ತಿದ್ದು, ಬಯಲು ಸೀಮೆ ಜಿಲ್ಲೆಗೆ ಕೃಷ್ಣಾ ನದಿಯ ಬಿ ಸ್ಕೀಂ ನಲ್ಲಿರುವ ಪಾಲಿನ ನೀರನ್ನು ಆಂದ್ರಪ್ರದೇಶಕ್ಕೆ ಹೆಚ್ಚುವರಿಯಾಗಿ ಹರಿಸಿ ಅಲ್ಲಿಂದ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನೀರನ್ನು ಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಜಲಜೀವನ್ ಯೋಜನೆಗೆ ನೀರೇ ಇಲ್ಲ :
ಕೇಂದ್ರ ಸರ್ಕಾರ ಜಲಜೀವನ್ ಯೋಜನೆಯನ್ನು ಜಾರಿಗೆ ತಂದು ಪ್ರತಿ ಮನೆಗೂ ನಲ್ಲಿ ಮೂಲಕ ನೀರು ನೀಡಲು ಮುಂದಾಗಿದೆ. ಇದರ ಭಾಗವಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ.೫೦ ಕ್ಕೂ ಹೆಚ್ಚು ಗ್ರಾಮಗಳಿಗೆ ಈಗಾಗಲೇ ನಲ್ಲಿಗಳನ್ನು ಅಳವಡಿಸಿ ನೀರು ನೀಡುತ್ತಿದೆ. ನೀರಿಗಾಗಿ ಕೊರೆದಿರುವ ಕೊಳವೆ ಬಾವಿಗಳು ಬತ್ತಿ ಹೋಗುವ ಹಂತಕ್ಕೆ ತಲುಪಿವೆ. ಬರೀ ಪೈಪ್‌ಲೈನ್‌ಗಾಗಿ ಯೋಜನೆಯ ಹಣ ಪೋಲಾಗುವಂತೆ ಆಗಿದೆ. ತ್ವರಿತ ಗತಿಯಲ್ಲಿ ಎತ್ತಿನಹೊಳೆ ಯೋಜನೆಯ ನೀರಿನ ಪಾಲು ಕೋಲಾರ ಚಿಕ್ಕಬಳ್ಳಾಪುರಕ್ಕೆ ಬರುವಂತೆ ಆಗಬೇಕು ಅಥವಾ ಕೃಷ್ಣಾ ನದಿಯ ನೀರು ತರುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕಾಗಿದೆ ಎಂದು ಲೋಕಸಭೆಯಲ್ಲಿ ಒತ್ತಾಯಪಡಿಸಿದರು.
ಚಿತ್ರ ೨೦ ಕೆ.ಎಲ್.ಆರ್. ೦೧ : ಎಂ.ಮಲ್ಲೇಶ್‌ಬಾಬು ರವರ ಭಾವಚಿತ್ರ