ವಿಜಯವಾಣಿ ಸುದ್ದಿಜಾಲ ಕೋಲಾರ
ಅಪರಾಧ ಮುಕ್ತ ಸಮಾಜಕ್ಕಾಗಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ, ಬಾಲ್ಯವಿವಾಹ, ಸರಗಳ್ಳತನದ ಬಗ್ಗೆ ನಿಮಗೆ ಸಿಗುವ ಸುಳಿವನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜ್ ಕರೆ ನೀಡಿದರು.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿಸಾರ್ ನಗರದಲ್ಲಿ ಗುರುವಾರ ಅಪರಾಧ ತಡೆ ಮಾಸಾಚರಣೆ -೨೦೨೪ ರ ಸಲುವಾಗಿ ಸಭೆ ಏರ್ಪಡಿಸಿ ಸಾರ್ವಜನಿಕರಿಗೆ ಬಾಲ್ಯವಿವಾಹ, ಸೈಬರ್ ಅಪರಾಧ, ೧೧೨ ತುರ್ತು ಸೇವೆ, ಸರಗಳ್ಳತನ ಇತರ ಅಪರಾಧಗಳ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಪೊಲೀಸರು ಇರುವುದೇ ಕಾನೂನು ಸುರಕ್ಷತೆ ಕಾಪಾಡಲು, ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು. ಅಪರಾಧ ಪತ್ತೆ ಹಚ್ಚಲು ನೀಡುವ ಅಮೂಲ್ಯ ಮಾಹಿತಿಯಿಂದ ಅಪರಾಧಿಗಳನ್ನು ಪತ್ತೆಹಚ್ಚಿ ಮತ್ತಷ್ಟು ಪ್ರಕರಣಗಳು ನಡೆಯದಂತೆ ಕ್ರಮವಹಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದರ ತಡೆ ಪೊಲೀಸರು ಮಾತ್ರವಲ್ಲ ಸಾರ್ವಜನಿಕರದ್ದು ಪ್ರಮುಖ ಜವಾಬ್ದಾರಿ ಇದೆ ಈ ಕಾರ್ಯದಲ್ಲಿ ಕೈಜೋಡಿಸಿ, ಶಾಲೆಗೆ ಹೋಗಬೇಕಾದ ಮಕ್ಕಳನ್ನು ಬಲವಂತವಾಗಿ ಸಂಸಾರಕ್ಕೆ ನೂಕುವುದನ್ನು ತಪ್ಪಿಸೋಣ ಎಂದು ತಿಳಿಸಿದರು.
ಬಾಲ್ಯವಿವಾಹಕ್ಕೆ ನೆರವಾದರೆ ಪೋಷಕರು, ಮದುವೆ ಮಾಡಿಸಿದವರು, ಮದುವೆಗೆ ಬಂದವರೂ ಸಹಾ ಅಪರಾಧಿಗಳಾಗುತ್ತೀರಿ, ಇದಕ್ಕೆ ಕಠಿಣ ಶಿಕ್ಷೆ ಇದೆ ಎಂದು ಎಚ್ಚರಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿ ಎಂದು ಕಿವಿಮಾತು ಹೇಳಿದರು.
ಮಾದಕ ವಸ್ತುಗಳ ಬಳಕೆ ಕುರಿತಂತೆ ಎಚ್ಚರಿಕೆ ನೀಡಿದ ಅವರು, ಮಕ್ಕಳು, ಯುವಕರು ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ಪೋಷಕರು, ಅದರಲ್ಲೂ ತಾಯಂದಿರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು, ಮಾದಕ ವಸ್ತು ಸೇವಿಸಿ ಮಕ್ಕಳ ನಡೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಎಚ್ಚರಿಕೆವಹಿಸಬೇಕು ಎಂದು ಕೋರಿದರು.
ಸೈಬರ್ ಅಪರಾಧ ತಡೆಗೆ ಪೊಲೀಸರು ಸದಾ ಸಜ್ಜಾಗಿದ್ದಾರೆ, ಯಾರೇ ನಿಮಗೆ ದೂರವಾಣಿ ಕರೆ ಮಾಡಿ ನಾವು ಬ್ಯಾಂಕಿನಿAದ ಮಾತನಾಡುತ್ತಿದ್ದೇವೆ ಎಂದು ನಂಬಿಸಿ ನಿಮ್ಮಿಂದ ನಿಮ್ಮ ಬ್ಯಾಂಕ್ ಖಾತೆಯ ಪಿನ್ ಕೇಳಿದರೆ ಕೊಡದಿರಿ, ಅಪರಿಚಿತರ ಕುರಿತು ಎಚ್ಚರದಿಂದಿರಿ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಈಭಾಗದ ನೂರಾರು ಮಹಿಳೆಯರು, ಸಾರ್ವಜನಿಕರು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದು, ಕಾನೂನು ಮಾಹಿತಿ ಪಡೆದುಕೊಂಡರು.
ಈ ಭಾಗದ ಮುಖಂಡ ಕಾರ್ಪೆಂಟರ್ ಏಜಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೬ : ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿಸಾರ್ ನಗರದಲ್ಲಿ ಅಪರಾಧ ತಡೆ ಮಾಸಾಚರಣೆ -೨೦೨೪ ರ ಸಲುವಾಗಿ ಸಭೆ ಏರ್ಪಡಿಸಿ ಸಾರ್ವಜನಿಕರಿಗೆ ಬಾಲ್ಯವಿವಾಹ, ಸೈಬರ್ ಅಪರಾಧ, ೧೧೨ ತುರ್ತು ಸೇವೆ, ಸರಗಳ್ಳತನ ಇತರ ಅಪರಾಧಗಳ ಬಗ್ಗೆ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕಾಂತರಾಜು ಅರಿವು ಮೂಡಿಸಿದರು.