ಬೂದಿಕೋಟೆಯ ಮಾರ್ಕಂಡೇಯ ಡ್ಯಾಂನಿಂದ ಕೋಡಿ ಹರಿಯುತ್ತಿರುವ ನೀರಿನಲ್ಲಿ ಮಕ್ಕಳು ಆಟವಾಡುತ್ತಿರುವುದು. 
ನ್ಯೂಸ್

ಕೋಡಿ ಹರಿದ ಮಾರ್ಕಂಡೇಯ ಡ್ಯಾಂ

ಬೂದಿಕೋಟೆ: ಕೋಲಾರ ಜಿಲ್ಲೆಯ ಮಿನಿ ಕೆಆರ್‌ಎಸ್ ಎಂದೇ ಖ್ಯಾತಿ ಪಡೆದಿರುವ ಮಾರ್ಕಂಡೇಯ ಡ್ಯಾಂ ಕೋಡಿ ಶನಿವಾರ ಹರಿದಿದೆ.

ಬಂಗಾರಪೇಟೆ ತಾಲೂಕು ಬೂದಿಕೋಟೆಯ ಬಳಿ ಎರಡು ಬೆಟ್ಟಗಳ ನಡುವೆ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲಾಗಿದೆ.

ಜಿಲ್ಲೆಯಾದ್ಯಾಂತ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಾಲೂರು ತಾಲೂಕಿನ ಕೆರೆಕುಂಟೆಗಳು ಭರ್ತಿಯಾಗಿ ಮಾರ್ಕಂಡೇಯ ಡ್ಯಾಂಗೆ ನೀರಿನ ಒಳ ಹರಿವು ಹೆಚ್ಚಾಗಿ ಬಂದ ಕಾರಣ ಡ್ಯಾಂ ತುಂಬಿ 2ನೇ ಬಾರಿಗೆ ಕೋಡಿ ಹರಿದಿದೆ. ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದ ಕಾರಣ ಸುಮಾರು 17 ವರ್ಷಗಳಿಂದ ಡ್ಯಾಂ ತುಂಬಿ ಕೋಡಿ ಹರಿದಿರಲಿಲ್ಲ.

ನವಂಬರ್ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಡ್ಯಾಂ ತುಂಂಬಿ ಕೋಡಿ ಹರಿದಿತ್ತು. 80 ಅಡಿಗಳ ಆಳವಿರುವ ಡ್ಯಾಂ ಈಗ ಆರು ತಿಂಗಳ ನಂತರ ಮಳೆ ಹೆಚ್ಚಾದ ಕಾರಣ ಕೋಡಿ ಹರಿದಿದ್ದು, ಡ್ಯಾಂ ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಮಾರ್ಕಂಡೇಯ ಡ್ಯಾಂನಿಂದ ಹೊರ ಹೋಗುವ ನೀರು ನೇರವಾಗಿ ಯರಗೋಳ್ ಡ್ಯಾಂ ಸೇರಲಿದ್ದು, ಇದೇ ರೀತಿ ಹಲವು ದಿನಗಳ ಕಾಲ ರಭಸವಾಗಿ ಕೋಡಿ ಹರಿದರೆ ಯರಗೋಳ್ ಡ್ಯಾಂ ಸಹ ತುಂಬಿ ಕೋಡಿ ಹರಿಯಲಿದೆ.