ನ್ಯೂಸ್

ಕೋಚಿಮುಲ್‌ನಿಂದ ವಿಭಜನೆಗೊಂಡ ಕೋಮುಲ್‌ಗೆ ಪ್ರಾರಂಭದಲ್ಲಿಯೇ ವಿಘ್ನಗಳು / ಸ್ವಪಕ್ಷದ ನಿರ್ದೇಶಕರ ಬೀದಿ ರಂಪಾಟ / ಸಂಸ್ಥಾಪಕ ಎಂ.ವಿ.ಕೃಷ್ಣಪ್ಪನವರ ಆಶಯಗಳಿಗೆ ಎಳ್ಳುನೀರು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯಲ್ಲಿ ರೈತರ ಜೀವನಾಡಿಯಾಗಿರುವ ಕೋಮುಲ್ ಲಕ್ಷಾಂತರ ಹೆಣ್ಣುಮಕ್ಕಳ ಬದುಕಿಗೆ ಆಶ್ರಯವಾಗಿದೆ. ಕೋಚಿಮುಲ್‌ನಿಂದ ವಿಭಜನೆಯಾಗಿ ಹೊಸ ಆಡಳಿತ ಮಂಡಳಿ ರಚನೆಯಾಗಿ ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿರುವ ಹಂತದಲ್ಲಿರುವ ಕೋಮುಲ್‌ಗೆ ಈಗ ವಿಘ್ನಗಳು ಎದುರಾಗಿದ್ದು, ಇಬ್ಬರು ನಿರ್ದೇಶಕರ ವೈಯುಕ್ತಿಕ ಕಚ್ಚಾಟದಿಂದ ಬೀದಿ ರಂಪಾಟಕ್ಕೆ ಬಂದು ನಿಂತಿದೆ.

ಕೋಚಿಮುಲ್‌ನಿಂದ ವಿಭಜನೆಯಾದ ನಂತರ ಹಾಲಿನ ಶೇಖರಣೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳದೆ ವಿಭಜನೆಯಾಗುವ ಮುನ್ನ ಪ್ರತಿದಿನ ೬.೫೦ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ವಿಭಜನೆಯಾದ ನಂತರ ೭.೫ ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ಹೊಸ ಆಡಳಿತ ಮಂಡಳಿಯು ಅಧಿಕಾರಕ್ಕೆ ಬಂದಿದ್ದು, ಸುಮಾರು ೧೦ ಲಕ್ಷ ಲೀಟರ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹಾಲಿನ ಸಹಕಾರ ಸಂಘಗಳನ್ನು ಹೆಚ್ಚು ಮಾಡಬೇಕು. ಹೆಣ್ಣುಮಕ್ಕಳು ಗ್ರಾಮಗಳಿಂದ ಮತ್ತೊಂದು ಗ್ರಾಮಕ್ಕೆ ಹಾಲು ತೆಗೆದುಕೊಂಡು ಹೋಗದಂತೆ ಪ್ರತಿ ಗ್ರಾಮದಲ್ಲಿ ಹಾಲಿನ ಸಂಘಗಳನ್ನು ರಚನೆ ಮಾಡಬೇಕು. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ಹಾಲಿನ ಬೆಲೆಯನ್ನು ರೈತರಿಗೆ ನೀಡಬೇಕು. ಕಡ್ಡಾಯಗಳಿಗೆ ರಾಸುಗಳಿಗೆ ವಿಮೆ ಹಾಗೂ ಜಿಲ್ಲೆಯಿಂದ ಖಾಸಗಿ ಡೈರಿಗಳನ್ನು ಕಿತ್ತೊಗೆಯಬೇಕು ಎಂಬುದು ಹೊಸ ಆಡಳಿತ ಮಂಡಳಿಯ ಯೋಜನೆಗಳು ಆಗಿವೆ.

ಇದರ ಜೊತೆಗೆ ಕೋಚಿಮುಲ್‌ನಿಂದ ನಿರ್ಮಾಣವಾಗುತ್ತಿರುವ ಸೋಲಾರ್ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಕೋಮುಲ್ ಆಡಳಿತ ಕಛೇರಿ ಸೇರಿದಂತೆ ಸ್ಥಳೀಯ ಬಿ.ಎಂ.ಸಿ.ಗಳಿಗೆ ಸರಬರಾಜು ಮಾಡಿ, ಮಾಸಿಕ ೭೦ ರಿಂದ ೮೦ ಲಕ್ಷ ಕೆ.ಪಿ.ಟಿ.ಸಿ.ಯವರಿಗೆ ನೀಡುತ್ತಿದ್ದ ಹಣವನ್ನು ಸಂಘಕ್ಕೆ ಉಳಿತಾಯ ಮಾಡಿಕೊಡಬೇಕು. ಹಾಗೂ ಕೋಮುಲ್‌ನಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಗೆ ವಿಸ್ತರಿಸಬೇಕೆಂಬ ಉದ್ದೇಶವೂ ಕೋಮುಲ್ ಹೊಂದಿದೆ.

ಆದರೆ ಆಡಳಿತ ಮಂಡಳಿ ರಚನೆಯಾದ ಪ್ರಾರಂಭದಿAದಲೂ ಕೋಮುಲ್ ನಿರ್ದೇಶಕರು ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ತನಿಖೆಯಾಗಬೇಕು. ಹಾಗೂ ಕೋಮುಲ್ ಸೋಲಾರ್ ಪ್ಲಾಂಟ್‌ಗೆ ಸರ್ಕಾರ ಮಂಜೂರು ಮಾಡಿರುವ ೫೦ ಎಕೆರೆ ಜಮೀನು ಕಾನೂನು ಬದ್ಧವಾಗಿ ನಡೆದಿಲ್ಲ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪ ಆರೋಪ ಮಾಡುವ ಮೂಲಕ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕೋಚಿಮುಲ್‌ನಿಂದ ವಿಭಜನೆಯಾದ ನಂತರ ಕೋಮುಲ್ ಪ್ರತ್ಯೇಕವಾಗಿ ಕೋಲಾರ ಜಿಲ್ಲೆಯಲ್ಲಿ ಸಂಸ್ಥೆ ಉತ್ತಮವಾಗಿ ಬೆಳೆದು ರೈತರಿಗೆ ಅನುಕೂಲಗಳನ್ನು ಮಾಡಿಕೊಡಬೇಕಾಗಿದ್ದ ಸಂಸ್ಥೆಯು ಈಗ ಬೀದಿ ರಂಪಾಟಕ್ಕೆ ಬಿದ್ದಂತಾಗಿದೆ. ಪ್ರಾರಂಭದಲ್ಲಿ ಹಲವಾರು ವಿಘ್ನಗಳು ಎದುರಾಗುತ್ತಿವೆ. ಕೋಮುಲ್‌ನಲ್ಲಿ ನಿರ್ದೇಶಕರಾಗಿರುವವರೇ ಈ ರೀತಿ ಬಹಿರಂಗ ಆರೋಪಗಳನ್ನು ಮಾಡಲು ಹೊರಟಿರುವುದರಿಂದ ಈ ಸಂಸ್ಥೆ ಮುಂದೆ ಉದ್ಧಾರ ಆಗುತ್ತದೆಯೇ ಎಂಬುದು ರೈತರಲ್ಲಿ ಆತಂಕ ಮೂಡುವಂತಾಗಿದೆ.

ಈ ವಿಚಾರವಾಗಿ ಕೋಮುಲ್‌ನ ಅಧ್ಯಕ್ಷ ಕೆ.ವೈ.ನಂಜೇಗೌಡ ಮತ್ತು ನಿರ್ದೇಶಕ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಹಿಂದೆ ಇದ್ದ ಕೋಚಿಮುಲ್‌ನಲ್ಲಿ ಉದ್ಯೋಗ ನೇಮಕಾತಿಯಲ್ಲಿ ನಡೆದಿರುವ ಹಗರಣಗಳು ಹಾಗೂ ಚುನಾವಣೆಗೆ ಮುನ್ನ ಆಡಳಿತಾಧಿಕಾರಿಗಳನ್ನು ನೇಮಿಸಿದ್ದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ತನಿಖೆ ನಡೆಸಬೇಕೆಂದು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈ ಎಲ್ಲವೂ ಸುಳ್ಳು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ಎಸ್.ಎನ್.ತಿರುಗೇಟು ನೀಡುತ್ತಿದ್ದು, ಎಲ್ಲವೂ ತನಿಖೆಯಾಗಿದೆ. ಕೋಮುಲ್ ಸೋಲಾರ್ ಪ್ಲಾಂಟಿಗೆ ಜಿಲ್ಲಾಧಿಕಾರಿಗಳು ಕಾನೂನು ಬದ್ಧವಾಗಿ ಜಮೀನು ಮಂಜೂರು ಮಾಡಲಾಗಿದೆ. ಸೋಲಾರ್ ಪ್ಲಾಂಟ್ ಈಗ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ರೀತಿಯು ಅಕ್ರಮ ನಡೆದಿಲ್ಲ ಎನ್ನುತ್ತಿದ್ದಾರೆ.

ಕೋಚಿಮುಲ್‌ಗೆ ಜಮೀನು ಮಂಜೂರಾತಿಗೆ ಪ್ರಸ್ತಾವನೆ :

೨೦೧೬ರಲ್ಲಿ ಕೋಚಿಮುಲ್ ಆಡಳಿತ ಮಂಡಳಿ ಹೊಳಲಿಹೊಸೂರು ಬಳಿ ೫೦ ಎಕೆರೆ ಜಮೀನು ಮಂಜೂರು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಮಾಡಿ, ಸದರಿ ಜಾಗದಲ್ಲಿ ಗಿಡಮರ, ಹಸಿರು ಹುಲ್ಲು ಹಾಗೂ ಕೋಚಿಮುಲ್‌ಗೆ ವಿವಿಧ ಕಾಮಗಾರಿಗಳಿಗೆ ಜಾಗ ಬೇಕು ಎಂದು ತಿಳಿಸಿದ್ದು, ೨೦೨೧ರಲ್ಲಿ ಕೋಚಿಮುಲ್‌ಗೆ ೫೦ ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು.

ಸದರಿ ಜಾಗದಲ್ಲಿ ಕಲ್ಲುಬಂಡೆ ಮತ್ತು ಬೆಣಸು ಕಲ್ಲುಗಳಿಂದ ಕೂಡಿದ ಜಾಗವಾದ ಕಾರಣ ಸದರಿ ಜಾಗದಲ್ಲಿ ಹಸಿರು ಹುಲ್ಲು ಮತ್ತು ಮರಗಿಡಗಳನ್ನು ಬೆಳೆಸುವುದು ಅಸಾಧ್ಯ ಎಂದು ಆಗಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಂಡು ಕೆ.ಎಂ.ಎಫ್‌ಗೆ ಶಿಫಾರಸ್ಸು ಮಾಡಿ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಕೆ.ಎಂ.ಎಫ್ ನವರು ಗುಲ್ಬರ್ಗ ಬಳಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಯೂನಿಟ್‌ಗೆ ೪ ರೂ.ಗಳಂತೆ ರಿಯಾಯಿತಿ ದರದಲ್ಲಿ ನಿಮಗೆ ವಿದ್ಯುತ್ ನೀಡಲಾಗುವುದು ಎಂದು ಕೋಲಾರ ಸೋಲಾರ್ ಪ್ಲಾಂಟ್‌ಗೆ ಅನುಮತಿ ನಿರಾಕರಿಸಿದರು. ಈ ವಿಷಯ ಮುಖ್ಯಮಂತ್ರಿಗಳ ತನಕ ತಲುಪಿ ಅಲ್ಲಿ ಚರ್ಚೆ ನಡೆದು ಕೋಲಾರದವರೇ ಸ್ವಂತ ನಿರ್ಮಾಣ ಮಾಡಿಕೊಳ್ಳಲಿ ಎಂದು ತೀರ್ಮಾನಿಸಲಾಯಿತು.

ಕೋಚಿಮುಲ್ ಆಡಳಿತ ಮಂಡಳಿಯಲ್ಲಿ ೨೦೨೦ ಮತ್ತು ೨೦೨೧ರಲ್ಲಿ ೬೮ ಕೋಟಿ ಸೋಲಾರ್ ಪ್ಲಾಂಟ್ ತಯಾರಿಸಲು ಡಿಪಿಆರ್ ತಯಾರಿಸಿ ಕೆ.ಎಂ.ಎಫ್‌ನಿAದ ಅನುಮತಿ ಪಡೆದುಕೊಂಡರು. ನಂತರ ಕೆಪಿಟಿಸಿಎಲ್.ನಿಂದಲೂ ಅನುಮತಿಯನ್ನು ಪಡೆದುಕೊಂಡು ೩ ಹಂತಗಳಲ್ಲಿ ಸೋಲಾರ್ ಪ್ಲಾಂಟ್ ಕಾಮಗಾರಿ ನಡೆಸಿ ಈಗ ಪೂರ್ಣಗೊಳ್ಳುವ ಹಂತ ತಲುಪಿದೆ.

೧೨ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ :

ಈಗಾಗಲೇ ೧೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕಾಮಗಾರಿ ಮುಗಿದಿದ್ದು, ಜುಲೈ ತಿಂಗಳಿAದ ೧೦ ಮೆಗಾವ್ಯಾಟ್ ವಿದ್ಯುತ್‌ನ್ನು ಕೋಮುಲ್ ಬಳಸಿಕೊಳ್ಳುತ್ತಿದೆ. ಇನ್ನು ಉಳಿದ ೨ ಮೆಗಾವ್ಯಾಟ್ ವಿದ್ಯುತ್ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಇದು ಪೂರ್ಣಗೊಂಡರೆ ಪ್ರತಿ ತಿಂಗಳು ೧.೩೦ ಕೋಟಿಯಷ್ಟು ವಿದ್ಯುತ್ ಪೂರೈಕೆಯಾಗುತ್ತದೆ. ವಾರ್ಷಿಕ ೧೫ ರಿಂದ ೧೬ ಸಾವಿರ ಕೋಟಿ ಸೋಲಾರ್ ಪ್ಲಾಂಟ್‌ನಿAದ ಒಕ್ಕೂಟಕ್ಕೆ ಹಣ ಸಂದಾಯವಾಗುತ್ತದೆ.

ಸ್ವಪಕ್ಷ ಶಾಸಕರಿಂದಲೇ ವಿರೋಧ :

ಕೋಮುಲ್ ಕಾಂಗ್ರೇಸ್ ಪಕ್ಷದ ಹಿಡಿತದಲ್ಲಿದೆ. ಕಾಂಗ್ರೇಸ್ ಪಕ್ಷದ ಬೆಂಬಲದಿAದ ಆಯ್ಕೆ ಆಗಿರುವ ನಿರ್ದೇಶಕರ ಸಂಖ್ಯೆಯೂ ಹೆಚ್ಚಾಗಿದೆ. ಅಧ್ಯಕ್ಷರು ಕಾಂಗ್ರೇಸ್ ಪಕ್ಷದ ನಿರ್ದೇಶಕರ ಬೆಂಬಲದಿAದಲೇ ಆಯ್ಕೆ ಆಗಿದ್ದಾರೆ. ಸ್ವಪಕ್ಷ ನಿರ್ದೇಶಕರ ಆಂತರಿಕ ಕಚ್ಚಾಟಗಳಿಂದ ಕೋಮುಲ್ ಪ್ರಾರಂಭದಲ್ಲಿಯೇ ಅಡೆತಡೆಗಳನ್ನು ಎದುರಿಸುವಂತಾಗಿದೆ. ಮುಂದೆ ಇದು ಯಾವ ಮಟ್ಟಕ್ಕೆ ಹೋಗುತ್ತದೆ ಕಾದು ನೋಡಬೇಕಾಗಿದೆ. ಕೋಲಾರಕ್ಕೆ ಡೈರಿಯನ್ನು ತಂದ ಎಂ.ವಿ.ಕೃಷ್ಣಪ್ಪನವರ ಆಶಯಗಳನ್ನು ಈಡೇರಿಸುತ್ತಾರೆಯೇ ಅಥವಾ ಎಳ್ಳುನೀರು ಬಿಡುತ್ತಾರೆಯೋ ಎಂಬ ಆತಂಕ ಮೂಡುವಂತಾಗಿದೆ.

ಚಿತ್ರ ೨೯ ಕೆ.ಎಲ್.ಆರ್. ೦೨ : ಕೋಮುಲ್‌ನಿಂದ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟ್ ಘಟಕ