ವಿಧಾನಸೌಧ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ-ಸಂಸ್ಕೃತಿ ಸಚಿವ ಸುನಿಲ್ಕುಮಾರ್, ಕಂದಾಯ ಸಚಿವ ಆರ್. ಅಶೋಕ್ ಇತರರಿದ್ದರು.
ಬೆಂಗಳೂರು: ಒಂದು ಕೋಟಿಗೂ ಅಧಿಕ ಮಂದಿ ಶುಕ್ರವಾರ ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ದಶದಿಕ್ಕುಗಳಲ್ಲೂ ಕನ್ನಡದ ಕಂಪನ್ನು ಹರಿಸಿದರು. 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದ್ದ ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರ ವಿಧಾನಸೌಧ, ಕಂಠೀರವ ಕ್ರೀಡಾಂಗಣ, ಹೈಕೋರ್ಟ್, ಪುರಭವನ, ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು ಸೇರಿ ನೂರಾರು ಸ್ಥಳಗಳಲ್ಲಿ ಏಕಕಾಲಕ್ಕೆ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಅಸ್ಮಿತೆ ಹಾಗೂ ಕನ್ನಡಾಭಿಮಾನ ಮೆರೆದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕನ್ನಡ ಗಾಯನವು 27 ನಿಮಿಷಗಳ ಕಾಲ ನಡೆಯಿತು. ಏಕಕಾಲಕ್ಕೆ ಹಾಡಿದ ಕನ್ನಡ ಹಾಡಿಗೆ ಭಾರತ ಸೇರಿ 46 ದೇಶಗಳಲ್ಲಿನ ಕನ್ನಡಿಗರು ದನಿಯಾದರು. ವಿಮಾನ
ಗಳಲ್ಲೂ ಕನ್ನಡ ಹಾಡು ಹಾಡುವ ಮೂಲಕ ಮುಗಿಲೆತ್ತರಕ್ಕೆ ಕನ್ನಡ ಕಂಪನ್ನು ಪಸರಿಸಿದರು. ರಾಷ್ಟ್ರಕವಿ ಕುವೆಂಪು ರಚಿತ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯೊಂದಿಗೆ ಆರಂಭವಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಚನ್ನವೀರ ಕಣವಿ ರಚನೆಯ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ರಚನೆಯ ‘ಬಾರಿಸು ಕನ್ನಡ ಡಿಂಡಿಮವ’, ಡಾ. ಡಿ.ಎಸ್. ರ್ಕಯವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ಹಾಡಿ ಕನ್ನಡದ ಉತ್ಸವವನ್ನು ಸಂಭ್ರಮಿಸಿದರು.
ಕೋಟಿ ಕಂಠ ಗಾಯನ ದಾಖಲೆಯನ್ನು ಸೃಷ್ಟಿಸಿದೆ. ಪ್ರತಿಯೊಂದು ಹಳ್ಳಿ-ಹಳ್ಳಿಯಲ್ಲೂ ಕನ್ನಡ ರಿಂಗಣಿಸುವ ಮೂಲಕ ಇಡೀ ನಾಡು ಕನ್ನಡಮಯವಾಗಿದೆ. ನವ ಕರ್ನಾಟಕ ನಿರ್ವಣದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯ. ಕೋಟಿ ಕಂಠ ಗಾಯನ ಎಲ್ಲ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿದೆ. ಒಂದು ಕೋಟಿಗೂ ಅಧಿಕ ಜನರು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಮನಸ್ಸುಗಳು ಒಂದಾಗಬೇಕೆಂಬ ಹಂಬಲ ಈಡೇರಿದೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಶಕ್ತಿಸೌಧದಲ್ಲಿ ಹಾಡುಗಾರಿಕೆ ಸಡಗರ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಚಿವಾಲಯದ ಸಿಬ್ಬಂದಿ ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಆರು ಹಾಡುಗಳಿಗೆ ದನಿಗೂಡಿಸುವ ಮೂಲಕ ಕನ್ನಡದ ವಾತಾವರಣಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ಕುಮಾರ್, ಕಂದಾಯ ಸಚಿವ ಆರ್. ಅಶೋಕ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಹಾಗೂ ಇತರರು ಹಾಡುವ ಮೂಲಕ ಹುರಿದುಂಬಿಸಿದರು. ಗಾಯನದ ನಂತರ ಸಚಿವ ಸುನಿಲ್ಕುಮಾರ್, ಕನ್ನಡವನ್ನೇ ಬಳಸುವ ಹಾಗೂ ಬೆಳೆಸುವ ಕುರಿತು ಪ್ರಮಾಣ ವಚನ ಬೋಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ 35 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಹಾಡುಗಳನ್ನು ಹಾಡಿದರು.
ವಿಆರ್ಎಲ್ ಸಂಸ್ಥೆಯಲ್ಲಿ ಗಾಯನ
ಹುಬ್ಬಳ್ಳಿ: ತಾಲೂಕಿನ ವರೂರಿನಲ್ಲಿರುವ ವಿಆರ್ಎಲ್ ಸಂಸ್ಥೆಯ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ ‘ನನ್ನ ನಾಡು- ನನ್ನ ಹಾಡು’ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರೂಪಿಸಿರುವ ಕನ್ನಡ ನಾಡು- ನುಡಿಯ ಹಾಡುಗಳನ್ನು ಸಾವಿರಕ್ಕೂ ಹೆಚ್ಚು ನೌಕರರು, ಅಧಿಕಾರಿಗಳು ಹಾಡುವ ಮೂಲಕ ಇಡೀ ಆವರಣದಲ್ಲಿ ಕನ್ನಡದ ಕಂಪು ಪಸರಿಸಿದರು. ಏಕಕಾಲಕ್ಕೆ ಎಲ್ಲ ಸಿಬ್ಬಂದಿ ಧ್ವನಿ ಗೂಡಿಸುವ ಮೂಲಕ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ಕನ್ನಡ ಪ್ರೇಮವನ್ನು ಅಭಿವ್ಯಕ್ತಪಡಿಸಿದರು. ವಿಆರ್ಎಲ್ ಸಂಸ್ಥೆಯ ಸಿಎಫ್ಒ ಸುನೀಲ ನಲವಡಿ, ವಿಪಿ ಎಸ್.ಜಿ. ಪಾಟೀಲ್, ವಿಪಿ ಆರ್.ಬಿ. ಮಾಳಗಿ, ಜಿಎಂ ಬಾಪೂ ಮಕ್ಕಣ್ಣವರ, ಮೀಡಿಯಾ ಡಿಜಿಎಂ ರಾಜು ಕರಿಗೌಡರ್, ಎಜಿಎಂ ಧೀರೇಂದ್ರ ಚವಟೆ, ಡಿಜಿಎಂ ಕೆ.ಐ. ಶಿರಕೋಳ, ಜಿಎಂ ಪಿ.ಜಿ. ಕಳ್ಳಿಮಠ, ಕೃಷ್ಣಮೂರ್ತಿ ಭಟ್ಟ ಸೇರಿ ಸಾವಿರಾರು ಸಿಬ್ಬಂದಿ ಪಾಲ್ಗೊಂಡಿದ್ದರು.
ಜಿಲ್ಲೆಗಳಲ್ಲೂ ಮೇಳೈಸಿದ ಕನ್ನಡ
- ಮೈಸೂರು ಅರಮನೆ ಆವರಣದಲ್ಲಿ ಸಾರ್ವಜನಿಕರು ಸೇರಿ 15 ಸಾವಿರ ವಿದ್ಯಾರ್ಥಿಗಳು, ಮಡಕೇರಿಯ ರಾಜಾಸೀಟ್ ಉದ್ಯಾನದಲ್ಲಿ ವಿದ್ಯಾರ್ಥಿಗಳು ಸೇರಿ 2500 ಜನ, ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯದ ಮುಂಭಾಗ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
- ಚಿತ್ರದುರ್ಗದ ಐತಿಹಾಸಿಕ ಏಳುಸುತ್ತಿನ ಕೋಟೆ ದ್ವಾರದ ಮುಂಭಾಗ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕನ್ನಡಾಭಿಮಾನ ಮೆರೆದರು.
- ಮಂಗಳೂರಿನ ಸುಲ್ತಾನ್ ಬತ್ತೇರಿಯಲ್ಲಿ ಸುಮಾರು 50 ಬೋಟ್ಗಳ ಮೂಲಕ ಸಾಗಿ ನದಿ-ಸಮುದ್ರ ಸಂಗಮ ಸ್ಥಳದಲ್ಲಿ ಗೀತ ಗಾಯನ ಹಾಡಲಾಯಿತು.
- ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 8 ಕಡೆಗಳಲ್ಲಿ ವಿದ್ಯಾರ್ಥಿಗಳ ಸಹಿತ 20 ಸಾವಿರಕ್ಕೂ ಅಧಿಕ ಮಂದಿ ಕನ್ನಡ ಗಾಯನ ಮೊಳಗಿಸಿದರು.
- ಉಡುಪಿಯ ಮಲ್ಪೆ ಕಡಲತೀರದಿಂದ 130 ಬೋಟುಗಳಲ್ಲಿ 4000ಕ್ಕೂ ಅಧಿಕ ಮೀನುಗಾರರು ಕನ್ನಡ ಬಾವುಟದಿಂದ ಅಲಂಕರಿಸಿದ ಪರ್ಸಿನ್ ಬೋಟುಗಳಲ್ಲಿ ತೆರಳಿ ಕನ್ನಡ ಗೀತೆಗಳನ್ನು ಹಾಡಿದರು.
- ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗ ಸಹಸ್ರಾರು ವಿದ್ಯಾರ್ಥಿಗಳು ಕನ್ನಡದ ಕಹಳೆ ಮೊಳಗಿಸಿದರು.
- ಯಾದಗಿರಿಯಲಿ ಹಾಡುಗಾರಿಕೆ ಜತೆಗೆ 4800 ಶಾಲಾ ಮಕ್ಕಳಿಂದ ನಿರ್ವಿುಸಿದ ಕರ್ನಾಟಕ ನಕಾಶೆ ಗಮನ ಸೆಳೆಯಿತು.
- ಕುಂದಾಪುರ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕೋಟಿ ಕಂಠ ಗಾಯನದ ವೇಳೆ ಬಿಸಿಲಿನ ತಾಪದಿಂದಾಗಿ 22 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಕುಸಿದುಬಿದ್ದ ಪರಿಣಾಮ ಕಾರ್ಯಕ್ರಮ ಅರ್ಧಕ್ಕೇ ಮೊಟಕುಗೊಂಡಿತು. ಗಾಯನದಲ್ಲಿ 3 ಸಾವಿರ ವಿದ್ಯಾರ್ಥಿನಿಯರ ಸಹಿತ 5 ಸಾವಿರ ಮಂದಿ ಭಾಗವಹಿಸಿದ್ದರು.
- ಸಿದ್ಧಗಂಗಾ ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಮಕ್ಕಳು ಹಾಡುಗಳಿಗೆ ಧ್ವನಿಗೂಡಿಸಿದರು.
- ಬೆಂಗಳೂರು ಗ್ರಾಮಾಂತರ ಜಿಲ್ಲೆ ಐತಿಹಾಸಿಕ ಆವತಿ ಬೆಟ್ಟದ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.