ನ್ಯೂಸ್

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆಟೋ ಚಾಲಕ ಯೋಗೇಶ್ ಶಿಕ್ಷೆಗೆ ಗುರಿಯಾದ ಆರೋಪಿ.

ಏನಿದು ಪ್ರಕರಣ: 2024ರ ಮೇ 24ರಂದು ಎಚ್.ಡಿ.ಕೋಟೆ ರಸ್ತೆಯ ಕೋಟೆಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋ ಹಾಗೂ ಮಹೀಂದ್ರ ಗೂಡ್ಸ್ ವಾಹನದ ನಡುವೆ ಸಣ್ಣ ಪ್ರಮಾಣದ ಅಪಘಾತ ಆಗಿತ್ತು. ಈ ವೇಳೆ ಎರಡೂ ವಾಹನಗಳ ಚಾಲಕರ ನಡುವೆ ಗಲಾಟೆ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಈ ವೇಳೆ ಆಟೋ ಚಾಲಕ ಯೋಗೇಶ್, ಮಹೀಂದ್ರ ಗೂಡ್ಸ್ ವಾಹನದ ವಾಹನದಲ್ಲಿದ್ದ ಟಿ.ಮಂಜುನಾಥ ಮತ್ತು ಆರ್.ಮಂಜುನಾಥ ಎಂಬವರ ಮೇಲೆ ತನ್ನ ಬಳಿ ಇದ್ದ ಚಾಕುವಿನಿಂದ ಮನಸ್ಸೋಯಿಚ್ಚೆ ಬಲವಾಗಿ ಚುಚ್ಚಿ ಕೊಲೆ ಮಾಡಿದ್ದ.

ಪ್ರಕರಣ ಕುರಿತು ಜಯಪುರ ಠಾಣೆ ನಿರೀಕ್ಷಕ ಕೆ.ಜೀವನ್ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಅವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿತರು ಅಪರಾಧ ಎಸಗಿರುವುದು ಸಾಬೀತಾಗಿದ್ದರಿಂದ ಆರೋಪಿತರಿಗೆ ಕಲಂ 504 ಐಪಿಸಿ ಅಡಿಯ ಅಪರಾಧಕ್ಕೆ 1 ವರ್ಷ ಕಠಿಣ ಶಿಕ್ಷೆ ಮತ್ತು 1,000 ರೂ. ದಂಡ, ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 10,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಬಿ.ಈ.ಯೋಗೇಶ್ವರ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.