ನ್ಯೂಸ್

ಕೊಲೆ ಆರೋಪಿ ಮೇಲೆ ಪೊಲೀಸರ ಫೈರಿಂಗ್​; ಜಗನ್​ಮೋಹನ್​ರೆಡ್ಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗಬ್ಬರ್

ಕೋಲಾರ/ಮುಳಬಾಗಿಲು: ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಮುಳಬಾಗಿಲು ನಗರಸಭೆ ಸದಸ್ಯ ಜಗನ್​ಮೋಹನ್​ರೆಡ್ಡಿ ಕೊಲೆ ಪ್ರಕರಣದ ಆರೋಪಿ ಸುಪಾರಿ ಕಿಲ್ಲರ್​ ಬಾಲಾಜಿಸಿಂಗ್​ ಅಲಿಯಾಸ್​ ಗಬ್ಬರ್​ಸಿಂಗ್​ನ ಮೇಲೆ ಪೊಲೀಸರು ಗುಂಡುಹಾರಿಸಿ ಬಂಧಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. 17 ದಿನಗಳ ಹಿಂದೆ ಜಗನ್​ ಮೋಹನ್​ರೆಡ್ಡಿ ಕೊಲೆಯಾಗಿತ್ತು. ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸುಪಾರಿ ಕಿಲ್ಲರ್​ ಗಬ್ಬರ್​ಸಿಂಗ್​ ತಲೆಮರೆಸಿಕೊಂಡು ಮೈಸೂರಿನಲ್ಲಿದ್ದ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಮುಳಬಾಗಿಲು ಪೊಲೀಸ್​ ಇನ್​ಸ್ಪೆಕ್ಟರ್​ ಲಕ್ಷ್ಮೀಕಾಂತ ಹಾಗೂ ತಂಡ ಮೈಸೂರಿಗೆ ತೆರಳಿ ಆರೋಪಿಯನ್ನು ಗುರುವಾರ ರಾತ್ರಿ ಬಂಧಿಸಿ ಕರೆತರುತ್ತಿದ್ದರು. ಗುರುವಾರ ಬೆಳಗಿನ ಜಾವ ಕೋಲಾರ ತಾಲೂಕು ಮಡೇರಹಳ್ಳಿ ಬಳಿ ರಾ. ಹೆದ್ದಾರಿ ಪಕ್ಕದಲ್ಲಿ ಆರೋಪಿ ಮೂತ್ರವಿಸರ್ಜನೆ ಮಾಡಬೇಕು ಎಂದು ಪೊಲೀಸರನ್ನು ಕೇಳಿದ್ದಾನೆ. ಆಗ ಪೊಲೀಸ್​ ವಾಹನ ನಿಲ್ಲಿಸಿ, ಅವನ ಕೈಗೆ ಹಾಕಿದ್ದ ಹ್ಯಾಂಡ್​ಕಪ್​(ಕೈಕೋಳ) ತೆಗೆದು ವಾಹನದಿಂದ ಕೆಳಗಿಳಿಸಿದ್ದಾರೆ. ಈ ವೇಳೆ ಆರೋಪಿಯು ಪೊಲೀಸ್​ ಕಾನ್​ಸ್ಟೇಬಲ್​ ರಾಜೇಶ್​ ಮೇಲೆ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಜಾಗೃತರಾದ ಮತ್ತೊಬ್ಬ ಪೇದೆ ವಿನಾಯಕ್​ ಗಬ್ಬರ್​ನನ್ನು ಹಿಡಿಯಲೆತ್ನಿಸಿದ್ದಾರೆ. ಆದರೆ ಅವರ ಮೇಲೆ ಸ್ಥಳದಲ್ಲಿದ್ದ ಕಲ್ಲೊಂದನ್ನು ಎತ್ತಿಹಾಕಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಮುಳಬಾಗಿಲು ಇನ್​ಸ್ಪೆಕ್ಟರ್​ ಲಕ್ಷಿ$್ಮಕಾಂತ್​ ಆರೋಪಿಗೆ ಓಡಿಹೋಗಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಅವರ ಮಾತನ್ನು ಕೇಳಿಸಿಕೊಳ್ಳದ ಆರೋಪಿ ಲಕ್ಷ್ಮೀಕಾಂತ ಮೇಲೆ ಸಮೀಪದಲ್ಲೇ ಇದ್ದ ದೊಣ್ಣೆ ಕೈಗೆತ್ತಿಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆಗ ಇನ್ಸ್​ಪೆಕ್ಟರ್​ ಲಕ್ಷ್ಮೀಕಾಂತ​ ತಮ್ಮ ಬಳಿ ಇದ್ದ ಸರ್ವೀಸ್​ ರಿವಲ್ವಾರ್​ನಿಂದ ಗಬ್ಬರ್​ ಸಿಂಗ್​ ಬಲ ಕಾಲಿಗೆ ಗುಂಡು ಹಾರಿಸಿದ್ದಾರೆೆ. ಗುಂಡೇಟು ತಿಂದ ಆರೋಪಿ ಹಾಗೂ ಹಲ್ಲೆಗೊಳಗಾಗಿದ್ದ ಕಾನ್​ಸ್ಟೇಬಲ್​ ವಿನಾಯಕ್​ ಅವರನ್ನು ನಗರದ ಎಸ್ಸೆನ್ನಾರ್​ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಪ್ರಕರಣಗಳಲ್ಲಿ ಭಾಗಿ: ಆರೋಪಿ ಗಬ್ಬರ್​ಸಿಂಗ್​ ಮುಳಬಾಗಿಲು ಮೂಲದವನಾಗಿದ್ದು, ಬಂಗಾರಪೇಟೆ ಯಲ್ಲಿ ವಾಸವಾಗಿದ್ದ. ಫೈನಾನ್ಸ್​, ಮೀಟರ್​ಬಡ್ಡಿ ವ್ಯವಹಾರ ಮಾಡಿಕೊಂಡು ಹಲವು ಅಪರಾಧ ಪ್ರಕರಣಗಳಲ್ಲಿ ಭಗಿಯಾಗಿದ್ದ.ಈತ 2017ರಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಅವರ ಬೈಕ್​ ಕಸಿದುಕೊಂಡು ಹೋಗಿದ್ದ. ನಂತರ ಮುಳಬಾಗಿಲಿನ ಬಾಯಿಕೊಂಡ ಗಂಗಮ್ಮ ಕಬಾಬ್​ ಸೆಂಟರ್​ ಮಾಲೀಕ ನಾರಾಯಣ್​ ಎಂಬಾತನನ್ನು ಆತನ ಹೆಂಡತಿಯಿಂದಲೇ 6 ಲಕ್ಷ ರೂ. ಸುಪಾರಿ ಪಡೆದು ಕೊಲೆ ಮಾಡಿದ್ದ. ಗಬ್ಬರಸಿಂಗ್​ ಮೇಲೆ ಈ ಹಿಂದೆಯೇ ಕೊಲೆ, ದರೋಡೆ, ಡಕಾಯತಿ ಪ್ರಕರಣಗಳು ದಾಖಲಾಗಿದ್ದವು. ಇದರ ನಡುವೆ ಮುಳಬಾಗಿಲಿನ ಜಗನ್​, ಧನುಷ್​, ಮನೋಜ್​ ಎಂಬುವರ ಜತೆ ಸೇರಿ ಜೂ 7ರಂದು ನಗರಸಭೆ ಸದಸ್ಯ ಜಗನ್​ಮೋಹನ್​ರೆಡ್ಡಿ ಅವರನ್ನು ಕೊಲೆ ಮಾಡಿ ನಂತರ ತಲೆಮರೆಸಿಕೊಂಡಿದ್ದ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ವಿವಿಧೆಡೆ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳು: ಮುಳಬಾಗಿಲು ಗಣೇಶಪಾಳ್ಯದ ಮಧು (25), ಬೆಂಗಳೂರಿನ ನಾಗೇಶ್​ (30), ಮುಳಬಾಗಿಲಿನ ಅಶ್ವಿನಿ (35), ಮನೋಜ್​ (30) ರನ್ನು ಬಂಧಿಸಿದ್ದು ಮನೋಜ್​ ಮತ್ತು ನಾಗೇಶನನ್ನು ಮಾತ್ರ ಬೆಂಗಳೂರಿನ ಪೀಣ್ಯದಲ್ಲಿ ವಶಕ್ಕೆ ಪಡೆದರೆ ಉಳಿದವರನ್ನು ಮುಳಬಾಗಿಲಿನಲ್ಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಾದ ಜಗನ್ನಾಥ್​, ಧನುಷ್​, ಧನಂಜಯ, ಅಭಿನಂದನ್​, ನವೀನ್​, ಮಹೇಶ್​, ಪ್ರಸಾದ್​ ಅವರ ಅಡಗುದಾಣಗಳ ಜಾಡನ್ನು ಪೊಲೀಸರು ಜಾಲಾಡುತ್ತಿದ್ದು ಒಂದೆರಡು ದಿನದಲ್ಲೇ ಇವರ ಹೆಡೆಮುರಿ ಕಟ್ಟಲು ಸಜ್ಜುಗೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಿದ ನಂತರವೇ ಕೊಲೆಗೆ ಕಾರಣ ತಿಳಿಯಲಿದೆ. ಕೊಲೆ ಮಾಡಿದವರು ಯಾರು? ಯಾಕೆ ಮಾಡಿದ್ದಾರೆ ಎಂಬ ಹಲವು ಗೊಂದಲಗಳಿಗೆ ತೆರೆ ಬೀಳಲಿದೆ. ಆರೋಪಿಗಳು ಒಂದೆಡೆ ನಿಲ್ಲದೆ ಓಡಾಡುತ್ತಿರುವುದರಿಂದ ಬಂಧನ ವಿಳಂಬವಾಗಿದೆ. - ಚಂದ್ರಶೇಖರ್​, ಕೇಂದ್ರ ವಲಯ, ಐಜಿಪಿ ಜಗನ್ಮೋಹನ್​ರೆಡ್ಡಿ ಕೊಲೆ ಪ್ರಕರಣದ ಆರೋಪಿ ಗಬ್ಬರ್​ಸಿಂಗ್​ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನಲ್ಲದೆ, ಗ್ರಾಮಾಂತರ ಠಾಣೆಯಲ್ಲಿ ರೌಡಿಶೀಟರ್​ ತೆರೆಯಲಾಗಿತ್ತು. ಉಳಿದ ಆರೋಪಿಗಳನ್ನು ಸಹ ಶೀಘ್ರ ಬಂಧಿಸಲಾಗುವುದು. -ಡಿ.ದೇವರಾಜ, ಎಸ್ಪಿ ಕೋಲಾರ