ಚಿತ್ರದುರ್ಗ: ನಗರದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪುತ್ರನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದ ಹೊಳಲ್ಕೆರೆ ರಸ್ತೆಯ ಸಿಹಿನೀರು ಹೊಂಡ ಬೀದಿಯ ನಿವಾಸಿ ಚಂದ್ರಪ್ಪ (55) ಶುಕ್ರವಾರ ನಿಧನ ಹೊಂದಿದರು.
ಪ್ರಕರಣದಲ್ಲಿ ಪುತ್ರ ಅನಿಲ್‌ಕುಮಾರ್ ಆಲಿಯಾಸ್ ಅನು ಹೆಸರು ನೆರೆಹೊರೆಯವರ ಮೂಲಕ ತಿಳಿದ ನಂತರ ದಿಗ್ಭ್ರಾಂತರಾಗಿದ್ದ ಚಂದ್ರಪ್ಪ ಅವರು ದಿಕ್ಕೇ ತೋಚದಂತಾಗಿ, ಕಂಗಾಲಾಗಿದ್ದರು. ತಾಯಿ ಜಯಮ್ಮ ಕೂಡ ಬಿಕ್ಕಿ-ಬಿಕ್ಕಿ ಅತ್ತು ಮಗನಿಗಾಗಿ ಮನೆಯ ಮುಂದೆ ಗೋಳಾಡಿದರು.
ದುಃಖದಲ್ಲಿ ಮುಳುಗಿದ್ದ ಚಂದ್ರಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಲೊ-ಬಿಪಿ ಉಂಟಾಗಿದ್ದು, ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟಿದ್ದಾರೆ.
ಒಂದೆಡೆ ಪುತ್ರ ಪೊಲೀಸರ ಅತಿಥಿ, ಇದೇ ವಿಚಾರವಾಗಿ ನೊಂದು ಮೃತಪಟ್ಟ ಪತಿ. ಇದು ಜಯಮ್ಮ ಅವರಿಗೆ, ಅನು ಸಹೋದರ, ಸಹೋದರಿಗೆ ಬರಸಿಡಿಲು ಬಡಿದಂತಾಗಿದೆ. ಈ ಕುಟುಂಬವೀಗ ಶೋಕದಲ್ಲಿ ಮುಳುಗಿದೆ.