ನ್ಯೂಸ್

ಕೊರಚ ಸಮುದಾಯದ ಯುವ ಮುಖಂಡ ಸಾವು

ತಿ.ನರಸೀಪುರ: ದಲಿತ ಸಂಘರ್ಷ ಸಮಿತಿಯ ಹೋರಾಟದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅಲೆಮಾರಿ ಕೊರಚ ಸಮುದಾಯದ ಯುವ ಮುಖಂಡ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಪಟ್ಟಣದ ಕೊರಚರ ಕಾಲನಿಯ ನಿವಾಸಿ ಲೇ. ಕೃಷ್ಣಪ್ಪ ಅವರ ಪುತ್ರ ವೆಂಕಟೇಶ್(38) ಮೃತರು. ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಹೊನ್ನಗಾನಹಳ್ಳಿ ಮುಖ್ಯ ರಸ್ತೆಯಲ್ಲಿ ಫೆ.26 ರಂದು ಬೆಳಗ್ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಾಡಿದ್ದಿಯಾಗಿ ಚಲಿಸಿ ಬಂದ ಸ್ಕೂಟರ್ ಸವಾರ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡು ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ವಾರಸುದಾರರಿಗೆ ನೀಡಿದ್ದು, ಶನಿವಾರ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.