ಎಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ತಾಯಿ ಹುಲಿ ಉರುಳಿಗೆ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ತಬ್ಬಲಿಯಾಗಿದ್ದ ಮೂರು ಹುಲಿ ಮರಿಗಳು ಕೊನೆಗೂ ಪತ್ತೆಯಾಗಿವೆ.
ಕಳೆದ ನಾಲ್ಕು ದಿನಗಳಿಂದ ನಾಗರಹೊಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ಕೈಗೊಂಡಿತ್ತು. ಬುಧವಾರ ಹುಲಿ ಮರಿಗಳು ಪತ್ತೆಯಾಗಿದ್ದು, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಹುಲಿ ಮರಿಗಳ ಪತ್ತೆಗೆ ಅರಣ್ಯ ಇಲಾಖೆ ತಾಯಿ ಹುಲಿ ಕಳೇಬರ ಪತ್ತೆ ಆದ ಸ್ಥಳ ಹಾಗೂ ಅದು ವಾಸವಾಗಿದ್ದ ಸ್ಥಳದ ಸುತ್ತಮುತ್ತ 20ರಿಂದ 30 ಕ್ಯಾಮರಾಗಳನ್ನು ಅಳವಡಿಸಿತ್ತು. ಹುಲಿ ಮರಿಗಳ ಹೆಜ್ಜೆ ಗುರುತು ಜಾಡು ಹಿಡಿದು ಸಾಕಾನೆಗಳಾದ ಅಭಿಮನ್ಯು, ಅಶ್ವತ್ಥಾಮ, ಮಹೇಂದ್ರ, ಭೀಮಾ, ಗಣೇಶ ಹಾಗೂ 100 ಜನ ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಅರಣ್ಯ ಹಾಗೂ ಅರಣ್ಯದಂಚಿನ ಜಮೀನಿನಲ್ಲಿ ಕಾರ್ಯಚರಣೆ ಕೈಗೊಂಡಿತು. ಆದರೆ ಹುಲಿ ಮರಿಗಳು ಸಿಬ್ಬಂದಿ ಕಣ್ಣಿಗೆ ಬಿದ್ದಿರಲಿಲ್ಲ, ಕ್ಯಾಮರಾದಲ್ಲೂ ಸೆರೆ ಆಗಿರಲಿಲ್ಲ. ಮಂಗಳವಾರ ನಾಯಂಜಿಕಟ್ಟೆ ಸಮೀಪ ಹುಲಿ ಮರಿಗಳ ಹೆಜ್ಜೆ ಗುರುತು ಕಂಡುಬಂದಿದ್ದರಿಂದ ಆ ಸ್ಥಳದ ಸುತ್ತಮುತ್ತ ಹೆಚ್ಚುವರಿಯಾಗಿ 10ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಲಾಗಿತ್ತು.
ಬುಧವಾರ ಬೆಳಗ್ಗೆ ಕ್ಯಾಮರಾ ಪರಿಶೀಲನೆ ನಡೆಸಿದಾಗ ಮೂರು ಹುಲಿ ಮರಿಗಳು ನಾಯಂಜಿಕಟ್ಟೆ ಸಮೀಪದಲ್ಲೇ ಇರುವುದು ಪತ್ತೆಯಾಗಿದ್ದು, ಆರೋಗ್ಯವಾಗಿ ಓಡಾಡಿಕೊಂಡಿರುವುದು ಕಂಡುಬಂದಿದೆ. ಹುಲಿ ಮರಿಗಳು ಒಂದು ಜಿಂಕೆಯನ್ನು ಬೇಟೆ ಆಡಿ ಕೊಂದು ಅದರ ಮಾಂಸವನ್ನು ಭಕ್ಷಿಸುತ್ತಿರುವುದು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಮರಿಗಳ ರಕ್ಷಣೆಗೆ ಇಲಾಖೆ ಕ್ರಮವಹಿಸಲಿದೆ ಎಂದು ಅಂತರಸಂತೆ ವಲಯ ಅರಣ್ಯ ಅಧಿಕಾರಿ ಸಿದ್ದರಾಜು ಮಾಹಿತಿ ನೀಡಿದ್ದಾರೆ.
ನಾಗರಹೊಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಂಗಸ್ವಾಮಿ, ಗೌರವ ವನ್ಯಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು, ಹರ್ಷಿತ್, ಎಸ್‌ಟಿಪಿಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಘಟನೆ ಹಿನ್ನೆಲೆ:
ನಾಗರಹೊಳೆ ಅರಣ್ಯ ವ್ಯಾಪ್ತಿಯ ತಾಲೂಕಿನ ಅಂತರಸಂತೆ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತಿರುವ ತಾರಕ ಸಮೀಪದ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 12-13 ವರ್ಷದ ಹೆಣ್ಣು ಹುಲಿಯ ಕಳೇಬರ ಇತ್ತೀಚೆಗೆ ಪತ್ತೆಯಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಕಾಡುಹಂದಿಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.
ಆದರೆ, ಹುಲಿಯ ಮೂರು ಮರಿಗಳು ನಾಪತ್ತೆಯಾಗಿದ್ದವು. ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿ ಅರಣ್ಯ ಇಲಾಖೆ ಸುತ್ತಲು ಕ್ಯಾಮರಾ ಅಳವಡಿಸಿ ಐದು ದಿನಗಳಿಂದ ಮರಿಗಳಿಗಾಗಿ ಹುಡುಕಾಟ ನಡೆಸಿತ್ತು. ಅದೀಗ ಫಲಪ್ರದವಾಗಿದೆ.