ನ್ಯೂಸ್

ಕೊಟ್ಟಿಗೆಯಲ್ಲಿ ಕಟ್ಟಿದ್ದ ಟಗರು ಕಳವು

ಕೆ.ಆರ್.ನಗರ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಟಗರನ್ನು ಮಾಲೀಕನ ಕಣ್ಣ ಮುಂದೆಯೇ ಶುಕ್ರವಾರ ಬೆಳಗಿನ ಜಾವ ಕಳ್ಳನೊಬ್ಬ ಕದ್ದೊಯ್ದಿದ್ದಾನೆ.

ಪಟ್ಟಣದ ಆಂಜನೇಯ ಬಡಾವಣೆಯ ಬಜಾರ್ ರಸ್ತೆ ನಿವಾಸಿ, ರೈತ ರಾಘವೇಂದ್ರ ಅವರ ಟಗರು ಕಳವಾಗಿದೆ.

ಮನೆ ಮುಂದಿನ ಕೊಟ್ಟಿಗೆಯಲ್ಲಿ ಹಸುಗಳು, ಟಗರು, ಮೇಕೆಗಳನ್ನು ಕಟ್ಟಲಾಗಿತ್ತು. ಬೆಳಗಿನ ಜಾವ 3 ಗಂಟೆಯಲ್ಲಿ ಕಳ್ಳನೊಬ್ಬ ಕಾಂಪೌಂಡ್ ದಾಟಿ ಕೊಟ್ಟಿಗೆಯೊಳಗೆ ಬಂದು ಟಗರನ್ನು ಕಟ್ಟಿದ್ದ ಹಗ್ಗವನ್ನು ಬಿಚ್ಚುವ ಸಂದರ್ಭದಲ್ಲಿ ಸದ್ದಾಗಿದ್ದು, ಎಚ್ಚರಗೊಂಡ ರಾಘವೇಂದ್ರ, ಕಿಟಿಕಿಯಲ್ಲಿ ನೋಡಿದಾಗ ಟಗರನ್ನು ಹೊತ್ತೊಯ್ಯತ್ತಿರುವುದು ಕಂಡುಬಂದಿದೆ.

ಜೋರಾಗಿ ಕಿರುಚುತ್ತ ಹೊರ ಬರುವಷ್ಟರಲ್ಲಿ ಟಗರನ್ನು ಎತ್ತಿಕೊಂಡು ಕಾಪೌಂಡ್ ಜಿಗಿದು ಕೆಳಗೆ ಬಿದ್ದ ಟಗರನ್ನು ಬಿಡದೆ ಎದ್ದು ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಹೊರಗೆ ಬಂದು ಕಳ್ಳನನ್ನು ಹಿಂಬಾಲಿಸಿದರೂ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ರಾಘವೇಂದ್ರ ಪಟ್ಟಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.