ಬೆಂಗಳೂರು: ಕೆಪಿಸಿಸಿಗೆ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ ಎಐಸಿಸಿಗೆ ಇದೀಗ ಅಸಮಾಧಾನದ ಬಿಸಿ ತಟ್ಟಿದೆ. ತಮಗೆ ಪಕ್ಷದಲ್ಲಿ ಜವಾಬ್ದಾರಿ ನೀಡಿಲ್ಲ ಎಂದು ಪಕ್ಷ ನಿಷ್ಠ ಕೆಲವರು ಬಹಿರಂಗವಾಗಿಯೇ ದನಿ ಎತ್ತಿದ್ದು, ಜಾಲತಾಣದ ಮೂಲಕ ಬೇಸರವನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಗಮನಕ್ಕೆ ತಂದಿದ್ದಾರೆ.
ಸೆನ್ಸಾರ್ ಆಗಿದ್ದೆಲ್ಲಿ?: ಅವಕಾಶ ಸಿಗದೇ ಇರುವುದಕ್ಕೆ ಪಕ್ಷದ ರಾಜ್ಯ ಮುಖಂಡರಲ್ಲಿ ಕೆಲವರು ಬೇಸರ ತೋಡಿಕೊಂಡಿದ್ದು, ಈ ವೇಳೆ ‘ನಾವು ನಿಮ್ಮ ಹೆಸರು ಕಳಿಸಿದ್ದೆವು, ಆದರೆ ದೆಹಲಿಯಲ್ಲಿ ಸೆನ್ಸಾರ್ ಆಗಿದೆ’ ಎಂಬ ಉತ್ತರವನ್ನು ಮುಖಂಡರು ನೀಡಿದ್ದಾರೆ. ಹಾಗಿದ್ದರೆ ಸೆನ್ಸಾರ್ ಯಾವ ಹಂತದಲ್ಲಿ ಆಯಿತು? ಯಾವ ಕಾರಣಕ್ಕೆ ಆಯಿತು? ನಾವು ಪಕ್ಷಕ್ಕಾಗಿ ದುಡಿದಿಲ್ಲವೇ? ನಮ್ಮ ದುಡಿಮೆಗೆ ಬೆಲೆ ಇಲ್ಲವೇ? ವಾರ ಹದಿನೈದು ದಿನದಲ್ಲಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗುತ್ತದೆ, ಪಕ್ಷದಲ್ಲೂ ಜವಾಬ್ದಾರಿ ನೀಡುವ ಉದ್ದೇಶವೇನು? ಶಾಸಕರು, ಪರಿಷತ್ ಸದಸ್ಯರಿಗೆ ಹೆಚ್ಚುವರಿಯಾಗಿ ಪಕ್ಷದ ಜವಾಬ್ದಾರಿ ಅಗತ್ಯವೇನಿತ್ತು ಎಂಬಿತ್ಯಾದಿ ಅಸಮಾಧಾನಿತ ಪ್ರಶ್ನೆಗಳು ಪಕ್ಷದ ಮುಂದೆ ಪ್ರಸ್ತಾಪವಾಗಿದೆ.
ನಾಯಕರಿಗೂ ಬೇಸರ: ತಮ್ಮ ಬೆಂಬಲಕ್ಕೆ ನಿಂತು ಪಕ್ಷದ ಕೆಲಸ ಮಾಡಿದವರನ್ನು ಸಂಘಟನೆಯಲ್ಲಿ ಸೇರಿಸಬೇಕೆಂದು ಹಲವು ಪ್ರಮುಖ ನಾಯಕರು, ಕಾರ್ಯಾಧ್ಯಕ್ಷರು ಕೆಲವು ಹೆಸರು ಶಿಫಾರಸು ಮಾಡಿದ್ದರು, ಆ ಹೆಸರು ಪಟ್ಟಿಯಲ್ಲಿ ಬಂದಿಲ್ಲ. ಮೇಕೆದಾಟು ಪಾದಯಾತ್ರೆಯಲ್ಲಿ ತೆರೆ ಹಿಂದೆ ಹಗಲು ರಾತ್ರಿ ದುಡಿದು ವ್ಯವಸ್ಥಿತ ಆಯೋಜನೆ ಮಾಡಿದ್ದವರು, ಕಳೆದವಾರ ರಾಹುಲ್ ಗಾಂಧಿ ಬರುವ ಮುನ್ನ ಪೂರ್ವ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು, ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಕೊಂಡವರು ಹೀಗೆ ಪಕ್ಷಕ್ಕಾಗಿ ಸಮಯ ಕೊಟ್ಟವರು ಸಂಘಟನೆಯ ಜವಾಬ್ದಾರಿ ಸಿಗುವ ನಿರೀಕ್ಷೆಯಲ್ಲಿದ್ದರು. ಅವರಲ್ಲಿ ಬೇಸರ ಮಡುಗಟ್ಟಿದೆ.
ಮುಂದೇನು?: ಅವಕಾಶ ವಂಚಿತರೆಲ್ಲ ಒಂದು ಕಡೆ ಸೇರಿದ್ದು, ಈ ಪಟ್ಟಿ ಬೆಳೆಯುವ ಸಾಧ್ಯತೆ ಇದೆ ಮತ್ತು ಬೇಡಿಕೆಯನ್ನು ರಾಜ್ಯ ಉಸ್ತುವಾರಿ ಸುರ್ಜೆವಾಲ ಮುಂದೆ ಮಂಡಿಸಲು ನಿರ್ಧರಿಸಿದ್ದಾರೆ. ಸೋಮವಾರ ಸುರ್ಜೆವಾಲ ಬೆಂಗಳೂರಿಗೆ ಆಗಮಿಸುತ್ತಿದ್ದು, ಇದೇ ವೇಳೆ ಅವರ ಭೇಟಿಗೆ ಸಮಯ ಕೇಳಿ ಬೇಸರವನ್ನು ವ್ಯಕ್ತಪಡಿಸಲು ಬಯಸಿದ್ದಾರೆ. ಇಷ್ಟೇ ಅಲ್ಲದೇ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಗಮನಕ್ಕೆ ತರಲೂ ಉದ್ದೇಶಿಸಿದ್ದಾರೆ.
ತಾರತಮ್ಯ ಕೂಗು: ಪದಾಧಿಕಾರಿ ಜವಾಬ್ದಾರಿ ನೀಡುವಾಗ ತಾರತಮ್ಯ ಮಾಡಲಾಗಿದೆ ಎಂಬ ಕೂಗೆದ್ದಿದೆ. ಪಕ್ಷದ ಅಧ್ಯಕ್ಷರ ತಕ್ಕಡಿ ಎದ್ದಿಲ್ಲ ಎಂದ ವಿ.ಎಸ್.ಉಗ್ರಪ್ಪಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದೇ ವಿವಾದಾತ್ಮಕ ಚರ್ಚೆಯಲ್ಲಿ ದನಿಗೂಡಿಸಿದ್ದ ಸಮೀ ಉಲ್ಲಾರನ್ನು ಸಸ್ಪೆಂಡ್ ಮಾಡಲಾಗಿ ಪಕ್ಷದ ಚಟುವಟಿಕೆಯಿಂದ ದೂರ ಇಡಲಾಗಿದೆ. ಇದೇ ರೀತಿ ದನಿ ಎತ್ತಿದ್ದ ಅಶೋಕ್ ಪಟ್ಟಣಗೆ ಉಪಾಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಸಿದ್ದರಾಮಯ್ಯ ಕೃಪಾಕಟಾಕ್ಷವಿದೆ. ಇದೆಲ್ಲ ಪಕ್ಷದ ಒಳಗೆ ಸದ್ದಿಲ್ಲದೇ ಕೆಲಸ ಮಾಡುವ ಸಣ್ಣಪುಟ್ಟ ನಾಯಕರ ತಾಳ್ಮೆಕೆಡಿಸಿದೆ. ಹಿಂದುಳಿದವರಿಗೆ 53, ಎಸ್ಸಿ-25, ಎಸ್ಟಿ 4, ಅಲ್ಪಸಂಖ್ಯಾತ-22, ಒಕ್ಕಲಿಗ 16 ಹೀಗೆ ಜಾತಿವಾರು ಹಂಚಿಕೆ ಮಾಡಿದಾಗ ಲಿಂಗಾಯತರಿಗೆ ಕಡಿಮೆ ಅವಕಾಶ ಸಿಕ್ಕಿದೆ ಎಂದು ಆ ಪಕ್ಷದ ನಾಯಕರಿಂದಲೇ ಬೇಸರ ಕೇಳಿಬಂದಿದೆ. ಲಿಂಗಾಯತರನ್ನು ಕಾಂಗ್ರೆಸ್ ಒಳಗೊಳ್ಳುವುದು ಯಾವಾಗ, ಹೆಚ್ಚಿನವರಿಗೆ ಹೊಣೆಗಾರಿಕೆ ನೀಡಿದ್ದರೆ ಪಕ್ಷಕ್ಕೇ ಲಾಭ ಆಗುತ್ತಿತ್ತು ಎಂಬ ಅಭಿಪ್ರಾಯವಿದೆ.