ವೇಮಗಲ್: ಕೈಗಾರಿಕಾ ಅಗತ್ಯಗಳಿಗೆ ಬೇಕಾಗುವ ಬಾಟ್ಲಿಂಗ್ ಮತ್ತು ಶುದ್ಧೀಕರಣ ಸಾಧನಗಳ ತಯಾರಿಕೆಗೆ ದೇಶದಲ್ಲಿ ಅಪಾರ ಬೇಡಿಕೆ ಇದೆ. ಇದನ್ನು ಮನಗಂಡು ಕ್ರೋನ್ಸ್, ರಾಜ್ಯದಲ್ಲಿ ಈ ಸ್ಥಾವರ ಆರಂಭಿಸಲು ಮುಂದಾಗಿದೆ. ಇದರಿಂದ ಬಂಡವಾಳ ಹೂಡಿಕೆಯ ಜತೆಗೆ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಕೋಲಾರ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ-&25ರ ಒಟ್ಟಾರೆ 10.27 ಲಕ್ಷ ಕೋಟಿ ರೂ. ಹೂಡಿಕೆಯ ಭಾಗವಾಗಿ 315 ಕೋಟಿ ರೂ. ವೆಚ್ಚದಲ್ಲಿ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜರ್ಮನಿಯಲ್ಲಿ ರೋಡ್-ಶೋ ನಡೆಸಿದಾಗ, ಅಲ್ಲಿ ಕ್ರೋನ್ಸ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ, ವ್ಯವಸ್ಥೆ ವೀಕ್ಷಿಸಿದ್ದೆ. ಪ್ರಿಸಿಷನ್ ಇಂಜಿನಿಯರಿಂಗ್ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿರುವ ಕಂಪನಿಯು ಭಾರತದಲ್ಲಿನ ನೂತನ ಉತ್ಪಾದನಾ ಸ್ಥಾವರ ಆರಂಭಿಸುತ್ತಿರುವುದು ಸ್ವಾಗತಾರ್ಹ. ಜರ್ಮನಿಯಲ್ಲಿ ಏನಿದೆಯೋ ಅವೆಲ್ಲವೂ ನಮ್ಮಲ್ಲೂ ಬರಬೇಕು, ಇದಕ್ಕಾಗಿ ಸರ್ಕಾರವು ಎಲ್ಲ ರೀತಿಯ ಬೆಂಬಲ ಕೊಡಲು ಬದ್ಧ ಎಂದರು.
ಕಂಪನಿಯು ಹಂತ ಹಂತವಾಗಿ 315 ಕೋಟಿ ರೂ. ಹೂಡಿಕೆ ಮಾಡಲಿದ್ದು, 550 ಮಂದಿಗೆ ಉದ್ಯೋಗ ಸಿಗಲಿದೆ. ನಿಮಿಷಕ್ಕೆ ನೂರಾರು ಬಾಟಲಿ ಉತ್ಪಾದಿಸುವ ಯಂತ್ರಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ ಎಂದರು.
ನಮ್ಮಲ್ಲಿ ನೂತನ ಕೈಗಾರಿಕಾ ನೀತಿ ಜಾರಿಗೆ ತರಲಾಗಿದ್ದು, ಉದ್ದಿಮೆಗಳಿಗೆ ಬಂಡವಾಳದ ಮೇಲೆ ಸಹಾಯಧನ ಅಥವಾ ಉತ್ಪಾದನೆಗೆ ತಕ್ಕ ಪ್ರೋತ್ಸಾಹ ಭತ್ಯೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಕೊಡಲಾಗಿದೆ. ಜತೆಗೆ ಅಗತ್ಯ ಅನುಮೋದನೆಗಳನ್ನು ತ್ವರಿತಗತಿಯಲ್ಲಿ ನೀಡಲು ಪರಿಷತ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ರೈತರ ಮಕ್ಕಳಿಗೆ ಉದ್ಯೋಗ ಸೃಷ್ಟಿ
ಸ್ಥಳಿಯ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕೆಂದೂ ಸಚಿವರು ಕ್ರೋನ್ಸ್ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು. ವೇಮಗಲ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕರ್ನಾಟಕವನ್ನು ಉತ್ಪಾದನಾ ವಲಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆಯೂ ಸದ್ಯದಲ್ಲೇ ಪರಿಣಿತರ ಜತೆ ಚರ್ಚೆ ಕೂಡ ಮಾಡಲಾಗುವುದು. ಸಿಎಸ್ಆರ್ ಹಣ ಕೂಡ ಸ್ಥಳಿಯರ ಅಭಿವೃದ್ಧಿಗೆ ಬಳಸುವಂತೆ ಸಚಿವರು ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೋನ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ರೊಲ್ಫ್ ಗೋಲ್ಡ್ ಬ್ರೋನರ್, ಮಾರ್ಕಸ್ ವಿಂಟರ್, ಯೋಜನಾ ನಿರ್ದೇಶಕ ಡೇವಿಡ್ ಕ್ರಿಮ್ಮರ್, ಕ್ರೋನ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹರೀಶ ಹನುಗೋಡು, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೆಐಎಡಿಬಿ ಸಿಇಒ ಡಾ.ಮಹೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೀತಿ ಹೊಸೂರು ಮುರಳಿಗೌಡ ಇದ್ದರು.