ನ್ಯೂಸ್

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು / ಸ್ಥಳೀಯರಿಗೆ ಅವಕಾಶ ನೀಡದ ಕಂಪನಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು / ಸಂಸದ ಎಂ.ಮಲ್ಲೇಶ್‌ಬಾಬು

ವಿಜಯವಾಣಿ ಸುದ್ದಿಜಾಲ ಕೋಲಾರ

ಕೈಗಾರಿಕೋದ್ಯಮಿಗಳು ಸ್ಥಳೀಯವಾಗಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಸ್ಥಳೀಯರಿಗೆ ತಮ್ಮ ಕಂಪನಿಗಳಲ್ಲಿ ಅವಕಾಶ ನೀಡದೆ ಹೊರ ರಾಜ್ಯದವರಿಗೆ ಉನ್ನತ ಹುದ್ದೆಗಳ ಅವಕಾಶಗಳನ್ನು ನೀಡುತ್ತಿದ್ದೀರಿ. ಇದು ನಿಲ್ಲಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶಗಳು ನೀಡದಿದ್ದಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಸಂಸದ ಎಂ.ಮಲ್ಲೇಶ್‌ಬಾಬು ಕಂಪನಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ವಲಯದಲ್ಲಿರುವ ಹೋಂಡಾ ಕಂಪನಿ ಆವರಣದಲ್ಲಿ ಜಿಲ್ಲಾ ಕೈಗಾರಿಕಾ ಅಧಿಕಾರಿಗಳ ಮತ್ತು ಕೈಗಾರಿಕಾ ಮಾಲೀಕರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಯಿದ್ದು ಸ್ಥಳೀಯ ಕಂಪನಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶಗಳು ನೀಡಬೇಕು, ಜಿಲ್ಲೆಯ ಯುವಕರು ಬೆಂಗಳೂರಿಗೆ ಉದ್ಯೋಗಗಳು ಅರಿಸಿ ಹೋಗುವುದನ್ನು ತಪ್ಪಿಸಬೇಕು ಮತ್ತು ಜಿಲ್ಲೆಯಲ್ಲಿನ ಸಿ ಎಸ್ ಆರ್ ಹಣವನ್ನು ಜಿಲ್ಲೆಯ ಅಭಿವೃದ್ದಿಗೆ ವಿನಿಯೋಗಿಸಿ ಜಿಲ್ಲೆಯನ್ನು ಅಭಿವೃದ್ದಿ ಮಾಡಬೇಕೆಂದರು.

ನರಸಾಪುರ ಸುತ್ತಮುತ್ತಲ ಕಂಪನಿಗಳಲ್ಲಿ ರಾತ್ರಿ ಪಾಳಯದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಹಾಗು ಹೆಣ್ಣು ಮಕ್ಕಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚಿನ ಒತ್ತಡ ನೀಡಬಾರದು ಅಂತಹ ಘಟನೆಗಳು ಕಂಡುಬAದರೆ ಅಂತಹ ಕಂಪನಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ಸುಮಾರು ೫ ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಅದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಹಕರಿಸಬೇಕು ಹಾಗು ಹೊಸ ಕೈಗಾರಿಕಾ ಸ್ಥಾಪನೆ ಅನುಕೂಲಕರ ವಾತಾವರಣ ಕಲ್ಪಿಸಲಾಗುವುದು. ಶ್ರೀನಿವಾಸಪುರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕಂಪನಿಗಳವರಿಗೆ ಆಹ್ವಾನ ನೀಡಿದರು.

ಸಭೆಯಲ್ಲಿ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್, ಮಾಲೂರು ಶಾಸಕ ಕೆ.ವೈ ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅಧಿಕಾರಿಗಳು ಮತ್ತು ನರಸಾಪುರ ವ್ಯಾಪ್ತಿಯ ಕೈಗಾರಿಕೆಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಚಿತ್ರ ೩೦ ಕೆ.ಎಲ್.ಆರ್. ೦೫ : ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ವಲಯದಲ್ಲಿರುವ ಹೋಂಡಾ ಕಂಪನಿ ಆವರಣದಲ್ಲಿ ಜಿಲ್ಲಾ ಕೈಗಾರಿಕಾ ಅಧಿಕಾರಿಗಳ ಮತ್ತು ಕೈಗಾರಿಕಾ ಮಾಲೀಕರ ಸಭೆಯಲ್ಲಿ ಮಾತನಾಡಿದ ಸಂಸದ ಎಂ.ಮಲ್ಲೇಶ್‌ಬಾಬು, ಶಾಸಕ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ ಮುಂತಾದವರಿದ್ದರು.