ಚಾಮರಾಜನಗರ : ಮುಂಗಾರಿನಲ್ಲಿ ತೀವ್ರ ಬರದಿಂದ ಕಂಗೆಟ್ಟಿದ್ದ ರೈತರು ಹಿಂಗಾರು ಹಂಗಾಮಿನಲ್ಲಾದರೂ ಬಿತ್ತನೆ ಮಾಡಿರುವ ಕಡಲೆ ಹಾಗೂ ಹುರುಳಿಯಲ್ಲಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 1242 ಹೆಕ್ಟೇರ್, ಗುಂಡ್ಲುಪೇಟೆ 1856 ಹೆಕ್ಟೇರ್, ಕೊಳ್ಳೇಗಾಲ 83 ಹೆಕ್ಟೇರ್, ಹನೂರು 64 ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ 180 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಯನ್ನು ಬಿತ್ತನೆ ಮಾಡಲಾಗಿದೆ. ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ 3904 ಹೆಕ್ಟೇರ್, ಗುಂಡ್ಲುಪೇಟೆ 13722 ಹೆಕ್ಟೇರ್, ಕೊಳ್ಳೇಗಾಲ 468 ಹೆಕ್ಟೇರ್, ಹನೂರು 2084 ಹೆಕ್ಟೇರ್ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ 135 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿಯನ್ನು ಬಿತ್ತನೆ ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 3423 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಹಾಗೂ 20313 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿಯನ್ನು ಬಿತ್ತನೆ ಮಾಡಲಾಗಿದ್ದು, ಈಗಾಗಲೇ ಕಟಾವು ಮಾಡಲಾಗಿದೆ.
ಈ ವರ್ಷ ಮುಂಗಾರು ಮಳೆ ಇಲ್ಲದೆ, ಜಿಲ್ಲೆಯಾದ್ಯಂತ ಬರದ ಛಾಯೆ ಉಂಟಾಗಿ ರೈತರು ಸಮಸ್ಯೆ ಅನುಭವಿಸಿದ್ದರು. ಮುಂಗಾರಿನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಮೆಕ್ಕೆ ಜೋಳವನ್ನು ಬಿತ್ತನೆ ಮಾಡಿದ್ದರು. ಆದರೆ ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಹಿಂಗಾರಿನಲ್ಲಿ ಮಳೆಯಾಶ್ರಿತವಲ್ಲದ ಮತ್ತು ಇಬ್ಬನಿಯನ್ನು ಹೀರಿಕೊಂಡು ಬೆಳೆಯುವ ಕಡಲೆ ಮತ್ತು ಹುರುಳಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಚಾಮರಾಜನಗರ ತಾಲೂಕಿನಲ್ಲಿ ನಿಗದಿಗಿಂತಲೂ ಹೆಚ್ಚಾಗಿ ಕಡಲೆಯನ್ನು ರೈತರು ಬಿತ್ತನೆ ಮಾಡಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ಹುರುಳಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದಾರೆ. ಹಲವು ಸಂಕಷ್ಟಗಳ ನಡುವೆ ಕಡಲೆ ಮತ್ತು ಹುರುಳಿ ಉತ್ತಮವಾಗಿ ಬಂದಿದ್ದು, ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
24592 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ
ಜಿಲ್ಲೆಯಾದ್ಯಂತ 26114 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆಯ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 24592 ಹೆಕ್ಟೇರ್ ಸಾಧನೆ ಮಾಡಲಾಗಿದೆ. ಅದರಲ್ಲಿ ಹುರುಳಿಯನ್ನು 20313 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಡಲೆ 3425, ಹೆಸರು 10 ಹೆಕ್ಟೇರ್, ಅಲಸಂದೆ 266 , ಅವರೆ 578 ಹೆಕ್ಟೇರ್ ಹಾಗೂ ತೊಗರಿ ಮತ್ತು ಉದ್ದು ಬಿತ್ತನೆಯಲ್ಲಿ ಶೂನ್ಯ ಸಾಧನೆ ಮಾಡಲಾಗಿದೆ. ಏಕದಳ ಧಾನ್ಯದಲ್ಲಿ ಮುಸುಕಿನ ಜೋಳವನ್ನು ಸುಮಾರು 4754 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಈ ಬಾರಿ ಕಡಲೆ ಮತ್ತು ಹುರುಳಿ ರೈತರ ಕೈಹಿಡಿಯಬೇಕಾಗಿದೆ. ಹಲವು ಕಡೆಗಳಲ್ಲಿ ಬೆಳೆ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಬೆಳೆ ರೈತರ ಕೈಸೇರುವ ನಿರೀಕ್ಷೆ ಇದೆ.
ಸಹಕರಿಸಿದ ಇಬ್ಬನಿ:
ಜಿಲ್ಲೆಯಲ್ಲಿ ಈ ಬಾರಿ ಕಡಲೆ ಮತ್ತು ಹುರುಳಿ ಬೆಳೆಗೆ ಹಿಂಗಾರಿನಲ್ಲಿ ಮಳೆಯಾಗಬೇಕಿತ್ತು. ಆದರೆ ಮಳೆಯಾಗದಿದ್ದರೂ ಹಲವು ಕಡೆಗಳಲ್ಲಿ ಬೆಳೆ ಚೆನ್ನಾಗಿ ಬರಲು ಇಬ್ಬನಿ ಸಹಕಾರಿಯಾಗಿದೆ. ಕಳೆದ ಕೆಲವು ದಿನಗಳಿಂದ ಚಳಿ ಹೆಚ್ಚಾಗುತ್ತಿದ್ದು, ಕಡಲೆ ಬೆಳೆಗೆ ಸಹಕಾರಿಯಾಗುತ್ತಿದೆ. ಚಳಿ ಮತ್ತು ಇಬ್ಬನಿಯಿಂದಾಗಿ ಕಡಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಹಾಗಾಗಿ, ರೈತರು ಉತ್ತಮ ಬೆಳೆಯ ನಿರೀಕ್ಷೆ ಮಾಡುತ್ತಿದ್ದಾರೆ. ಹುರುಳಿಯನ್ನು ಈಗಾಗಲೇ ಕಟಾವು ಮಾಡಿದ್ದು, ರೈತರು ಒಕ್ಕಣೆ ಶುರು ಮಾಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಚ್ಚು ಹುರುಳಿ ಬೆಳೆಯನ್ನು ಹಾಗೂ ಚಾಮರಾಜನಗರ ತಾಲೂಕಿನಲ್ಲಿ ಕಡಲೆ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡಿ, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಫಸಲು ಕುಂಠಿತ: ಜಿಲ್ಲೆಯಾದ್ಯಂತ ಕಡಲೆ ಮತ್ತು ಹುರುಳಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದರೂ, ಇಳುವರಿ ಕುಂಠಿತವಾಗುವ ಲಕ್ಷಣಗಳು ಕಾಣಿಸುತ್ತಿವೆ. ಈ ಬಾರಿ ಬಿತ್ತನೆ ಮಾಡಿರುವ ಕಡಲೆ ಮತ್ತು ಹುರುಳಿ ಬಿತ್ತನೆ ಬೀಜ, ಖರ್ಚು-ವೆಚ್ಚ ಅಲ್ಲಿಗೆ ಸರಿಯಾಗುವ ಪರಿಸ್ಥಿತಿ ಇದೆ. ಶೇ.70ರಷ್ಟು ಇಳುವರಿ ಕುಂಠಿತವಾಗಿದೆ. ಒಂದು ಎಕರೆಯಲ್ಲಿ ಕಡಲೆ ಬೆಳೆದರೆ ಕನಿಷ್ಠ 8-10 ಕ್ವಿಂಟಾಲ್ ಬೆಳೆ ತೆಗೆಯಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 1 ಎಕರೆ ಪ್ರದೇಶದಲ್ಲಿ 1-2 ಕ್ವಿಂಟಾಲ್ ಬೆಳೆಯುವ ಪರಿಸ್ಥಿತಿಗೆ ಬಂದು ನಿಂತಿದೆ. 1 ಎಕರೆ ಪ್ರದೇಶದಲ್ಲಿ ಸುಮಾರು 6-7 ಕ್ವಿಂಟಾಲ್ ಹುರುಳಿ ಬೆಳೆ ಬೆಳೆಯಬಹುದಿತ್ತು. ಆದರೆ ಈಗ 1 ಕ್ವಿಂಟಾಲ್‌ಗೆ ಬಂದು ನಿಂತಿದೆ. ಈ ಬಾರಿ ಹಿಂಗಾರಿನಲ್ಲಿ ಮಳೆಯಾಗಿದ್ದರೆ ಇಳುವರಿ ಕುಸಿತವಾಗುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗದೆ ಶೇ.70 ಇಳುವರಿ ಕಡಿಮೆಯಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾಹಿತಿ ನೀಡಿದರು.
ಬಿತ್ತನೆ ಬೀಜ, ವ್ಯವಸಾಯ, ಕೂಲಿ ಸೇರಿದಂತೆ ಒಟ್ಟಾರೆ 1 ಎಕರೆಗೆ ಸುಮಾರು 15 ಸಾವಿರ ರೂ. ಖರ್ಚು ಬೀಳುತ್ತದೆ. ಹಲವು ಕಡೆಗಳಲ್ಲಿ ಇಬ್ಬನಿ ಹೆಚ್ಚಾಗಿ ಬೀಳುತ್ತಿರುವುದರಿಂದ ಬೆಳೆ ಚೆನ್ನಾಗಿ ಕಾಣಿಸುತ್ತದೆಯೇ ವಿನಾ ಇಳುವರಿ ಕುಂಠಿತವಾಗಿದೆ.ಹೊನ್ನೂರು ಬಸವಣ್ಣ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ, ಚಾಮರಾಜನಗರ ಮುಂಗಾರಿನಲ್ಲಿ ಬರವಿತ್ತು, ಹಿಂಗಾರಿಗೆ ಬರದ ಛಾಯೆ ಕಡಿಮೆಯಾಗಿತ್ತು. ಕಡಲೆ ಮತ್ತ ಹುರುಳಿ ಕಡಿಮೆ ನೀರಿನಲ್ಲೇ ಬೆಳೆಯಲಿದ್ದು, ಚಳಿ ಮತ್ತು ಇಬ್ಬನಿಯೂ ಸಹಕಾರಿಯಾಗಿದೆ. ಹಾಗಾಗಿ, ಕಡಲೆ ಮತ್ತು ಹುರುಳಿ ಬೆಳೆ ಉತ್ತಮವಾಗಿದೆ. ಇಳುವರಿಯಲ್ಲಿ ಹಿಂದಿನ ವರ್ಷದಷ್ಟೇ ನಿರೀಕ್ಷೆ ಮಾಡಲಾಗಿದೆ.ಎಸ್.ಅಬೀದ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಚಾಮರಾಜನಗರ