ನ್ಯೂಸ್

ಕೇಂದ್ರದಿಂದ ಮೇಕ್ ಇನ್ ಚೀನಾ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಾಲಿಸ್ಟರ್ ಬಟ್ಟೆಯಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಬಿಟ್ಟು ಮೇಕ್ ಇನ್ ಚೀನಾ ಮಾಡಲು ಹೊರಟಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಾಲಪಾಡ್ ಟೀಕಿಸಿದರು.

ಮಂಗಳವಾರ ಹುಬ್ಬಳ್ಳಿಯ ಬೆಂಗೇರಿಯ ರಾಷ್ಟ್ರಧ್ವಜ ತಯಾರಿಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರಧ್ವಜ ಸಹ ಚೀನಾದ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಾಗುವುದಾದರೆ ಮೇಕ್ ಇನ್ ಇಂಡಿಯಾಗೆ ಅರ್ಥವೇನಿದೆ? ಭಾರತದ ಧ್ವಜ ಭಾರತದಲ್ಲಿ ಸೃಷ್ಟಿಯಾಗದಿದ್ದರೆ ಅದು ಯಾರಿಗೆ ಅವಮಾನ ಎಂದು ಅವರು ಪ್ರಶ್ನಿಸಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿಯನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದ್ದರು. ವಿದೇಶಿ ಉತ್ಪನ್ನಗಳನ್ನು ಧಿಕ್ಕರಿಸಿ ಸ್ವದೇಶಿ ಖಾದಿ ಬಟ್ಟೆಯನ್ನೇ ಬಳಕೆ ಮಾಡಬೇಕು ಎಂದು ಕರೆ ನೀಡಿದ್ದರು. ಇಂದು ಕೇಂದ್ರ ಸರ್ಕಾರ ನಮ್ಮ ಖಾದಿ ಸಂಸ್ಕೃತಿಯನ್ನು ಹಾಳು ಮಾಡಲು ಹೊರಟಿದೆ. ಇದು ಲಕ್ಷಾಂತರ ಜನರ ದುಡಿಮೆ ಮೇಲೆ ಪರಿಣಾಮ ಬೀರಲಿದೆ ಎಂದರು.

ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖಂಡರು ಬೆಂಗೇರಿ ಖಾದಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಿದ್ದೇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಂಗೇರಿಯಿಂದಲೇ 1 ಲಕ್ಷ ಧ್ವಜ ಖರೀದಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ, ಇತರರು ಇದ್ದರು.