ನ್ಯೂಸ್

ಕೇಂದ್ರ ಸರ್ಕಾರದ ಆಯುಷ್ಮಾನ್ ದೇಶದ ಅತಿ ದೊಡ್ಡ ಫ್ಲಾಪ್ ಯೋಜನೆ / ವಿ.ರಮೇಶ್ ಆರೋಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಆಯುಷ್ಮಾನ್ ಯೋಜನೆ ಒಂದು ದೊಡ್ಡ ವಂಚನೆ. ನೂರಾರು ನಕಲಿ ರೋಗಿಗಳನ್ನು ತೋರಿಸುವ ಮೂಲಕ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಆರೋಪಿಸಿರುವ ವಿ.ರಮೇಶ್ ಆಮ್ ಆದ್ಮಿ ಪಕ್ಷ ಆಳ್ವಿಕೆಯ ದೆಹಲಿ ರಾಜ್ಯದಲ್ಲಿ ಈಗಾಗಲೇ ಅರವಿಂದ್ ಕೇಜ್ರಿವಾಲ್ ರವರು ಆರೋಗ್ಯ ಕ್ರಾಂತಿಯನ್ನೇ ಮಾಡಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಲಕ್ಷಾಂತರ ರೋಗಿಗಳಿಗೆ ೫೦ ಲಕ್ಷ ರೂಪಾಯಿಗಳವರೆಗೆ ಉಚಿತವಾಗಿ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಿದ್ದಾರೆ. ದೇಶದ ಪ್ರಧಾನಿ ಸುಳ್ಳು ಆರೋಪ ಮಾಡುವ ಮೂಲಕ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಆಯುಷ್ಮಾನ್ ಯೋಜನೆ ಸಂಪೂರ್ಣ ಫ್ಲಾಪ್ ಸ್ಕೀಮ್ ಆಗಿದೆ. ಇದರಲ್ಲಿ ೫ ಲಕ್ಷ ಮಿತಿಯವರೆಗೆ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯನ್ನು ದಾಖಲಿಸಿದರೆ ಮಾತ್ರ ಔಷಧಿಯು ಉಚಿತವಾಗಿರುತ್ತದೆ. ಒಪಿಡಿ ಸೌಲಭ್ಯವಿಲ್ಲ. ಇದು ಕೆಟ್ಟ ಯೋಜನೆಯಾಗಿದೆ. ಇಂದು ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನತೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಏಕೆಂದರೆ ದೆಹಲಿ ಸರ್ಕಾರವು ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ಔಷಧಿಗಳು ಉಚಿತ. ಚಿಕಿತ್ಸೆಗೆ ೫ ಲಕ್ಷ ಅಥವಾ ೫೦ ಲಕ್ಷ ವೆಚ್ಚವಾಗಲಿ, ಎಲ್ಲವೂ ಉಚಿತವಾಗಿ ಸಿಗುತ್ತಿದೆ ಎಂದರು.

ನಿಮ್ಮ ಮನೆಯಲ್ಲಿ ಲ್ಯಾಂಡ್ ಲೈನ್ ಫೋನ್ ಅಥವಾ ರೆಫ್ರಿಜರೇಟರ್ ಇದ್ದರೆ, ನೀವು ಆಯುಷ್ಮಾನ್ ಯೋಜನೆಯಿಂದ ವಂಚಿತರಾಗುತ್ತೀರಿ. ಇದರ ಪ್ರಕಾರ ವಾರ್ಷಿಕ ಆದಾಯ ೧.೮ ಲಕ್ಷಕ್ಕಿಂತ ಕಡಿಮೆ ಇರುವವರು ಮಾತ್ರ ೫ ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

ದೆಹಲಿ ಸರ್ಕಾರದ ಯೋಜನೆಯಲ್ಲಿ ಅಂತಹ ಯಾವುದೇ ನಿರ್ಬಂಧಗಳಿಲ್ಲ. ಆಯುಷ್ಮಾನ್ ಯೋಜನೆ ಅಥವಾ ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಇದರಲ್ಲಿ ಯಾವುದಾದರೂ ಕೇವಲ ಒಂದು ಯೋಜನೆಯನ್ನು ಮಾತ್ರ ನಡೆಸಬಹುದು ಎಂದು ಕೇಂದ್ರ ಸರ್ಕಾರವು ದೆಹಲಿ ಸರ್ಕಾರಕ್ಕೆ ಷರತ್ತು ವಿಧಿಸಿದೆ. ದೆಹಲಿಯ ಜನರು ಶೇ.೯೯ ರಷ್ಟು ದೆಹಲಿ ಸರ್ಕಾರದ ಆರೋಗ್ಯ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯ ಅವಶ್ಯಕತೆ ಇಲ್ಲ. ಇದೊಂದು ಹಳ್ಳ ಹಿಡಿದಿರುವ ಯೋಜನೆಯಾಗಿದೆ ಎಂದು ವಿ ರಮೇಶ್ ಆರೋಪಿಸಿದರು.

ಚಿತ್ರ ೦೫ ಕೆ.ಎಲ್.ಆರ್. ೦೩ : ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ರವರ ಭಾವಚಿತ್ರ