ಚಿತ್ರದುರ್ಗ: ಡಿಆರ್‌ಡಿಒ, ಇಸ್ರೋ, ಬಿಆರ್‌ಸಿ ಹಾಗೂ ಐಐಎಸ್‌ಸಿಗಳಿಂದಾಗಿ ಚಳ್ಳಕೆರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಸೈನ್ಸ್ ಸಿಟಿಯ ಹೆಗ್ಗಳಿಕೆ ಪಡೆದಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
4 ಸಂಸ್ಥೆಗಳಿಗೆ 11800 ಹೆಕ್ಟೇರ್ ಭೂಮಿ ಕೊಡಲಾಗಿದೆ. ಈಗ ಪ್ರಾಜೆಕ್ಟ್‌ಗಳು ಸಂಪೂರ್ಣವಾಗುತ್ತಿದ್ದು, ಹೆಚ್ಚುವರಿ ಭೂಮಿಯನ್ನು ಕೇಂದ್ರ ರೈತರ ಬಳಕೆಗೆ ಹಿಂತಿರುಗಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಪತ್ರ ಬರೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಈ ಸಂಸ್ಥೆಗಳಿಗೆ ಜಮೀನು ಕೊಟ್ಟಿದ್ದರಿಂದಾಗಿ ಹೈನುಗಾರಿಕೆ ಸೇರಿ ಭೂಮಿ ಅವಲಂಬಿತ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ವರ್ಗ, ಬುಡಕಟ್ಟು ಹಾಗೂ ಬಡವರಿಗೆ ಭೂಮಿ ಇಲ್ಲವಾಗಿದೆ. ಜಾನುವಾರು ಮೇಯಿಸಲು ತೊಂದರೆ ಆಗಿದೆ. ಅಪ್ಪಿ-ತಪ್ಪಿ ಮೇವು ಅರಸಿ ಹೋದ ಜಾನುವಾರು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಇದು ಬೇಸರದ ಸಂಗತಿ ಎಂದರು.
ಇಷ್ಟೊಂದು ಜಮೀನು ತ್ಯಾಗ ಮಾಡಿರುವ ಸ್ಥಳೀಯರಿಗೆ ಡಿ ಹಾಗೂ ಸಿ ಗ್ರೂಪ್ ಉದ್ಯೋಗದಲ್ಲಾದರೂ ಆದ್ಯತೆ ಸಿಗಬೇಕಿತ್ತು. ದೇಶದ ಹಿತದ ಜತೆಗೂ ಸ್ಥಳೀಯರ ಒಳಿತು ಕೂಡ ಮುಖ್ಯ. ಭದ್ರಾ ಮೇಲ್ದಂಡೆ ಯೋಜನೆಗೂ ನಮ್ಮ ಚಳ್ಳಕೆರೆ ತಾಲೂಕಿನಿಂದ ಒಂದು ಸಾವಿರ ಎಕರೆ (ಅರಣ್ಯಭೂಮಿ ಬದಲಿಗೆ) ಕೊಡಲಾಗಿದೆ. ಈ ಎಲ್ಲ ದೃಷ್ಟಿಯಿಂದ 371-ಜೆಯಂತೆ ನಮ್ಮ ತಾಲೂಕು ಸೇರಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಸಂಬಂಧ ಶೀಘ್ರದಲ್ಲೇ ಶಾಸಕರ ಅಧ್ಯಕ್ಷತೆ ಸಮಿತಿ ರಚನೆ ಆಗಲಿದೆ ಎಂದು ತಿಳಿಸಿದರು.