ನ್ಯೂಸ್

ಕೇಂದ್ರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಗೆ ಯಾವುದೇ ನಿರ್ದಿಷ್ಟ ಯೋಜನೆಗಳು ಘೋಷಣೆಯಾಗದೆ ಇದ್ದರೂ ವಿವಿಧ ಯೋಜನೆಗಳ ಲಾಭ ಜಿಲ್ಲೆಗೆ ದೊರೆಯಲಿದೆ.

ಆದಾಯ ತೆರಿಗೆ ವಿನಾಯಿತಿ, ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು, ಹೊಸ ವಿಮಾನ ನಿಲ್ದಾಣ ಘೋಷಣೆ, ಹೋಮ್ ಸ್ಟೇಗಳಿಗೆ ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಯೋಜನೆಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಬಜೆಟ್ ಮಧ್ಯಮ ವರ್ಗಕ್ಕೆ ಪೂರಕವಾಗಿದೆ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ. ಆದಾಯ ತೆರಿಗೆಯ ಸ್ಲ್ಯಾಬ್ ಬದಲಾವಣೆ ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲ ಮಾಡಿಕೊಡಲಿದೆ. ಹೋಮ್ ಸ್ಟೇಗಳಿಗೆ ಮುದ್ರಾ ಯೋಜನೆ ಅಡಿಯಲ್ಲಿ 5 ಕೋಟಿ ರೂ. ತನಕ ಸಾಲ ಕೊಡುವ ಪ್ರಸ್ತಾವನೆ ಮೈಸೂರಿನ ಪ್ರವಾಸೋದ್ಯಮ ಚಟುವಟಿಕೆ ವಿಸ್ತರಣೆಗೆ ಪೂರಕವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಸ್ಥಳೀಯ ಮಟ್ಟದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಗೆ ಹೆಚ್ಚು ಮಹತ್ವ ನೀಡಿರುವುದು, ಮೊಬೈಲ್ ಫೋನ್, ಬ್ಯಾಟರಿ ಉತ್ಪಾದನೆ, ಎಲೆಕ್ಟ್ರಾನಿಕ್ ವಾಹನ ಬಿಡಿಭಾಗಗಳ ಮೇಲಿನ ಕಸ್ಟಂ ಡ್ಯೂಟಿ ಕಡಿತಗೊಳಿಸಿರುವುದು ಕಾಟನ್ ಬಟ್ಟೆ, ಎಲೆಕ್ಟ್ರಾನಿಕ್ ವಾಹನಗಳು, ಮೊಬೈಲ್ ಫೋನ್‌ಗಳು ಅಗ್ಗವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಮೈಸೂರು ಜಿಲ್ಲೆಗೆ ನಿರ್ದಿಷ್ಟವಾಗಿ ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಕೇಂದ್ರ ಬಜೆಟ್ ಕುರಿತು ಜನಾಭಿಪ್ರಾಯಗಳು ಲೌಡ್‌ಸ್ಟೀಕರ್‌ನಲ್ಲಿ ವ್ಯಕ್ತವಾಗಿವೆ.