ನ್ಯೂಸ್

ಕೆಸಿ ವ್ಯಾಲಿ ನೀರಿಗೆ ಕನ್ನ

ಕೋಲಾರ: ತಾಲೂಕಿನ ಪಾಲಾರ್ ಕಾಲುವೆಯ ದೊಡ್ಡವಲ್ಲಬಿ ಹಾಗೂ ಹುಲ್ಲಂಕಲ್ಲು ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಕಾಲುವೆಗೆ ಪಂಪ್ ಮೋಟಾರ್ ಅಳವಡಿಸಿ ನೀರು ಕಳವು ಮಾಡುತ್ತಿರುವುದನ್ನು ಕೆಸಿ ವ್ಯಾಲಿ ಟಾಸ್ಕ್ ಫೋರ್ಸ್ ಅಧಿಕಾರಿಗಳ ತಂಡ ಸೋಮವಾರ ರಾತ್ರಿ ಪತ್ತೆ ಹಚ್ಚಿ 4 ಮೋಟಾರ್, ಸ್ಟಾರ್ಟರ್‌ಗಳನ್ನು ವಶಕ್ಕೆ ಪಡೆದಿದೆ.

ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಯುತ್ತಿರುವುದನ್ನು ಕಾಲುವೆ ಇಕ್ಕೆಲಗಳಲ್ಲಿನ ರೈತರು ಅಕ್ರಮವಾಗಿ ಪೈಪ್‌ಲೈನ್ ಎಳೆದು ರಾತ್ರೋರಾತ್ರಿ ಪಂಪ್ ಮೋಟಾರ್ ಇಟ್ಟು ನೀರು ಕಳವು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪತ್ತೆಗೆ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ ನೀರು ಕಳವು ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾಗಿತ್ತು.

ತಹಸೀಲ್ದಾರ್ ಸೇರಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಅಕ್ರಮ ಪತ್ತೆಹಚ್ಚಲಾಗಿತ್ತಾದರೂ ಲಾಕ್‌ಡೌನ್ ನಂತರದ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಾಚರಣೆ ನಡೆದಿರಲಿಲ್ಲ. ಹಾಗಾಗಿ ಕೆಲವರು ರಾಜಾರೋಷವಾಗಿ ಕಾಲುವೆಗೆ ಮೋಟಾರ್ ಇಟ್ಟು ನೀರನ್ನು ತೋಟಗಳಿಗೆ ಹರಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕೆಸಿ ವ್ಯಾಲಿ ಯೋಜನೆಯ ಎಇಇ ಕೃಷ್ಣ ನೇತೃತ್ವದ ಟಾಸ್ಕ್‌ಫೋರ್ಸ್ ತಂಡ ಎರಡು ದಿನಗಳಿಂದ ದೊಡ್ಡವಲ್ಲಬಿ ಹಾಗೂ ಹುಲ್ಲಂಕಲ್ಲು ಭಾಗದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿ ಕಾಲುವೆಯಿಂದ ನೀರನ್ನು ಜಮೀನುಗಳಿಗೆ ಹರಿಸುತ್ತಿದ್ದ 4 ಮೋಟಾರ್ ಹಾಗೂ ಸ್ಟಾಟರ್ಸ್‌ಗಳನ್ನು ವಶಕ್ಕೆ ಪಡೆದಿದೆ.

ಮೋಟಾರ್ ಅಳವಡಿಸಿ ನೀರು ಕದಿಯುತ್ತಿದ್ದವರು ಯಾರೆಂದು ತಿಳಿದಿಲ್ಲ, ವಶಕ್ಕೆ ಪಡೆದಿರುವ ಪಂಪ್ ಪಡೆಯಲು ಬರುವವರ ವಿರುದ್ಧ ಠಾಣೆಯಲ್ಲಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿರುವ ಎಇಇ ಕೃಷ್ಣ, ಕೆಸಿ ವ್ಯಾಲಿ ಕಾಲುವೆ ಮಾರ್ಗದಲ್ಲಿ ಟಾಸ್ಕ್‌ಫೋರ್ಸ್ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಯಾರೂ ಕಾಲುವೆಯಲ್ಲಿ ಹರಿಯುವ ನೀರನ್ನು ಮೇಲೆತ್ತುವ ಕೆಲಸ ಮಾಡಬಾರದು. ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮತ್ತೆ ಅಧಿಕಾರಿಗಳ ದಾಳಿ: ತಾಲೂಕಿನ ಕೂತಾಂಡಹಳ್ಳಿಯಲ್ಲಿ ಕೆಸಿ ವ್ಯಾಲಿ ನೀರು ತುಂಬಿರುವ ಕೆರೆಗೆ ಅಕ್ರಮವಾಗಿ ಪಂಪ್ ಅಳವಡಿಸಿಕೊಂಡು ವ್ಯವಸಾಯಕ್ಕೆ ಬಳಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಂಗಳವಾರ ದಾಳಿ ನಡೆಸಿದ ಅಧಿಕಾರಿಗಳು ಒಂದು ಮೋಟರ್, ಕೇಬಲ್ ಹಾಗೂ ಸ್ಟಾರ್ಟರ್ ವಶಕ್ಕೆ ಪಡೆದರು. ಕೆಸಿ ವ್ಯಾಲಿ ಯೋಜನೆ ಎಇಇ ಕೃಷ್ಣಪ್ಪ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸುರೇಶ್‌ಕುಮಾರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.