ಹಂಪಾಪುರ: ಎಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲೂಕಿನ ಗಡಿ ಅಂಚಿನಲ್ಲಿರುವ ಮೈಸೂರು ತಾಲೂಕಿನ ಮದ್ದೂರು ಗ್ರಾಮದ ಆಸುಪಾಸಿನಲ್ಲಿರುವ ವಡವಿನಕಟ್ಟೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೂರಾರು ಎಕರೆ ಭೂಮಿ ಮುಳುಗಡೆಯಾಗಿದೆ.
ಅಲ್ಲದೆ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಹೋಬಳಿಗೆ ಸೇರುವ ಹಾಗೂ ನಂಜನಗೂಡು ತಾಲೂಕಿನ ಇಬ್ಜಾಲ್ ಗ್ರಾಮದಲ್ಲಿನ ಮಲ್ಲಪ್ಪನಕಟ್ಟೆಯೂ ತುಂಬಿ ಕೋಡಿಬಿದ್ದು ಕೃಷಿಕರು ಒಂದು ವಾರದಿಂದಷ್ಟೇ ನಾಟಿ ಮಾಡಿದ ಸುಮಾರು 60 ಎಕರೆ ಭತ್ತ, ಹತ್ತಿ, ಕಬ್ಬು, ಶುಂಠಿ, ಬಾಳೆ, ರಾಗಿ, ಹೂವಿನ ತೋಟಗಳು ಜಲಾವೃತವಾಗಿವೆ.
ಹಂಪಾಪುರ ಹೋಬಳಿಗೆ ಸೇರುವ ಕವಡೆತಿಟ್ಟಿನ ಸಮೀಪದ ದೊಡ್ಡಕೆರೆ ಭರ್ತಿಯಾಗಿ ಕೋಡಿಬಿದ್ದಿದ್ದು, ಹೇರ್ಗಳ್ಳಿ, ಅವರೆಗೆರೆ, ವಡ್ಡರಪಾಳ್ಯದ ನೂರಾರು ಎಕರೆ ಜಮೀನುಗಳು ಸಂಪೂರ್ಣ ಮುಳುಗಡೆಯಾಗಿ ಸಾವಿರಾರು ಕೃಷಿಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ನೀರಾವರಿ ಇಲಾಖೆಯ ಇಂಜಿನಿಯರ್‌ಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಸಮರ್ಪಕವಾಗಿ ಕಬಿನಿ ಬಲದಂಡೆ ನಾಲೆಗೆ ಸೇರಿದ ಚಾನಲ್ಗಳ ಕಳಪೆ ಕಾಮಗಾರಿಯಿಂದ ಇಂತಹ ಅವಘಡ ಸಂಭವಿಸಿದೆ. ಸಂಬಂಧಪಟ್ಟ ನೀರಾವರಿ ಇಲಾಖೆ ಇಂಜಿನಿಯರ್‌ಗಳೇ ಇದಕ್ಕೆ ಮುಖ್ಯ ಕಾರಣ ಎಂದು ಇಬ್ಜಾಲ್ ಗ್ರಾಮಸ್ಥ ಶಿವಣ್ಣ ದೂರಿದ್ದಾರೆ.
ಸುತ್ತಮುತ್ತಲಿನ ಹೊಮ್ಮರಗಳ್ಳಿ, ಹಂಪಾಪುರ, ಮದ್ದೂರು, ಹರದನಹಳ್ಳಿ, ಚಂದ್ರವಾಡಿ ಹಾಗೂ ಹತ್ತು ಹಲವು ಹಳ್ಳಿಗಳ ಗ್ರಾಮಸ್ಥರು ಒಂದು ವಾರದ ಹಿಂದೆ ನಾಟಿ ಮಾಡಿದ್ದು ಒಂದು ಎಕರೆ ಜಮೀನಿಗೆ ಸುಮಾರು 30-35 ಸಾವಿರ ರೂ. ಖರ್ಚಾಗಿದ್ದು, ಬಾಳೆ, ಶುಂಠಿ, ನಾಟಿಗೆ ಸುಮಾರು 1 ಲಕ್ಷ ರೂ. ಖರ್ಚು ಮಾಡಿದ್ದೆವು. ಈಗ ಎಲ್ಲ ಬೆಳೆಯೂ ಜಲಾವೃತವಾಗಿ ತುಂಬಲಾರದ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ಕೊಡಿಸಿಕೊಡಬೇಕೆಂದು ನಷ್ಟಕ್ಕೊಳಗಾದ ಕೃಷಿಕರು ಆಗ್ರಹಿಸಿದ್ದಾರೆ.