ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರಿಗೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರು ತಮ್ಮ ಹಾಗೂ ಗಣಪತಿ ಅವರೊಡನೆ ಇದ್ದ ಒಡನಾಟ ಸ್ಮರಿಸಿ, ಅವರ ಅಗಲಿಕೆಗೆ ಕಂಬನಿ ಮಿಡಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಾವೆಲ್ಲರೂ ಗಣಪತಿ ಅವರಿಂದ ಪ್ರೇರಣೆ, ಸ್ಫೂರ್ತಿ ಪಡೆದವರೇ ಆಗಿದ್ದೇವೆ. ಅವರು ಎಲ್ಲರನ್ನೂ ನೇರವಾಗಿ ಪ್ರಶ್ನೆ ಮಾಡುತ್ತಿದ್ದರು. ಜತೆಗೆ ಪ್ರಶಂಸೆಯನ್ನೂ ಮಾಡುತ್ತಿದ್ದರು. ಎಲ್ಲರ ಬಗ್ಗೆ ಪ್ರೀತಿ, ನಂಬಿಕೆ ಇರಿಸಿಕೊಂಡಿದ್ದರು. ಕೊಡಗು ಜನ್ಮಭೂಮಿ ಆದರೂ ಮೈಸೂರು ಕರ್ಮಭೂಮಿ ಆಗಿತ್ತು ಎಂದು ಸ್ಮರಿಸಿದರು.
ರಾಜಕೀಯ ಕ್ಷೇತ್ರದಲ್ಲಿರುವ ತಾವೆಲ್ಲರೂ ಕೆ.ಬಿ.ಗಣಪತಿ ಅವರಿಗೆ ಕೃತಜ್ಞರಾಗಿರಬೇಕು. ಅವರು ನೀಡಿದ ಮಾರ್ಗದರ್ಶನ ಅಮೂಲ್ಯವಾಗಿದೆ. ಅವರು ಮಹಾಜ್ಞಾನಿ ಮಾತ್ರವಲ್ಲ, ಶಿಸ್ತಿನ ವ್ಯಕ್ತಿ ಸಹ ಆಗಿದ್ದರು. ಮೈಸೂರು ನಗರದ ಸರ್ವತೋಮುಖ ಬೆಳವಣಿಗೆಗೆ ಅಪಾರ ಕಾಳಜಿ ವಹಿಸಿದ್ದರು ಎಂದರು.
ಮಾಜಿ ಎಂಎಲ್ಸಿ ಡಿ.ಮಾದೇಗೌಡ ಮಾತನಾಡಿ, ಪತ್ರಿಕೆ ನಡೆಸುವ ವ್ಯಕ್ತಿ ಸಮಾಜಮುಖಿ ಆಗಿದ್ದರೆ ಸಮಾಜವನ್ನು ಏಳಿಗೆಗೆ ಕೊಂಡೊಯ್ಯಬಹುದು ಎಂಬುದಕ್ಕೆ ಕೆ.ಬಿ.ಗಣಪತಿ ಸಾಕ್ಷಿಯಾಗಿದ್ದಾರೆ. ಅವರ ಪತ್ರಿಕೆಯಲ್ಲಿ ನಾಳೆ ಏನು ಬರುತ್ತದೋ ಎಂಬ ಅಂಜಿಕೆಯಿಂದ ಹಲವಾರು ರಾಜಕಾರಣಿಗಳು ಸದಾ ಉತ್ತಮ ಕೆಲಸವನ್ನೇ ಮಾಡುತ್ತಿದ್ದರು ಎಂದರು.
ಹಿರಿಯ ವಕೀಲ ಅರುಣ್‌ಕುಮಾರ್, ವೈದ್ಯ ಡಾ.ಯೋಗಣ್ಣ, ಬೆಳ್ಳಿಯಪ್ಪ ಮತ್ತಿತರರು ಮಾತನಾಡಿದರು. ಮೂಗೂರು ನಂಜುಂಡಸ್ವಾಮಿ, ಕೆ.ದೀಪಕ್ ಇತರರಿದ್ದರು.