ನ್ಯೂಸ್

ಕೆಬಿಜಿ ಕನ್ನಡ, ಇಂಗ್ಲಿಷ್ ಎರಡರಲ್ಲೂ ಯಶಸ್ವಿ ಪತ್ರಕರ್ತರು

ಅಧ್ಯಯನಶೀಲ ಗುಣ ಮತ್ತು ಸೂಕ್ಷ್ಮ ಅವಲೋಕನದಿಂದ ಕೆ.ಬಿ.ಗಣಪತಿ (ಕೆಬಿಜಿ) ಅವರು 45 ವರ್ಷಗಳ ಕಾಲ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪತ್ರಕರ್ತರಾಗಿ ಯಶಸ್ವಿಯಾಗಿದ್ದಾರೆ ಎಂದು ಅರುಣಾಚಲಪ್ರದೇಶ ಇಟಾನಗರದ ರಾಜೀವ್‌ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಹೇಳಿದರು.

ಸಂವಹನ ಮೈಸೂರು ವತಿಯಿಂದ ನಗರದ ರಾಣಿಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರ ‘ಲೈಫ್ ಆ್ಯಂಡ್ ಟೈಮ್ಸ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕೆ.ಬಿ.ಗಣಪತಿ (ಕೆಬಿಜಿ) ಅವರು ಸೂರ್ಯನ ಕೆಳಗಿರುವ ಎಲ್ಲದರ ಬಗ್ಗೆ ನಿರರ್ಗಳವಾಗಿ ತಮ್ಮ ಬರವಣಿಗೆ ಕೌಶಲ ಮೆರೆದಿದ್ದಾರೆ. ಅದು ಕಾಮ, ಪ್ರೇಮ, ಪ್ರಸಿದ್ಧ ವ್ಯಕ್ತಿತ್ವಗಳು, ಅಧ್ಯಾತ್ಮ ಚಿಂತಕರೂ ಸೇರಿದಂತೆ ಇನ್ನಾವುದೇ ಇರಬಹುದು. ಅವರ ವಿಷಯ ವ್ಯಾಪ್ತಿ ನಿಜವಾಗಿಯೂ ಅಂತರ್ಗತ ಹಾಗೂ ಸಮಗ್ರವಾಗಿದೆ. ಸಂಜೆಯ ವೇಳೆಯ ಪತ್ರಿಕೆ ಅಂಕಣವು ಓದುಗರ ಆಸಕ್ತಿ, ಗಮನ ಮತ್ತು ಕುತೂಹಲ ಮೂಡಿಸುವಂತಿರಬೇಕು. ಆ ರೀತಿಯಲ್ಲಿ ಕೆಬಿಜಿ ಯಶಸ್ವಿ ಬರವಣಿಗೆ ಮಾಡುತ್ತಿದ್ದಾರೆ ಎಂದರು.

ಇಂದು ಬಿಡುಗಡೆಗೊಂಡ ಅವರ ಕೃತಿಯಲ್ಲಿ ಪುಸ್ತಕ ವಿಮರ್ಶೆ, ಖ್ಯಾತನಾಮರ ಕುರಿತ ನುಡಿಚಿತ್ರ ಬರಹ, ಪ್ರಸ್ತುತದ ವಿದ್ಯಮಾನ ಸೇರಿದಂತೆ ಅನೇಕ ವಿಷಯಗಳ ಕುರಿತು ಸಂಪೂರ್ಣ ವಿವರಗಳನ್ನು ಕಾಣಬಹುದು. ಯಾವುದೇ ಆದರೂ ನೇರ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ವ್ಯಕ್ತಿತ್ವ ಅವರದು. ವೈಶಿಷ್ಟ್ಯಪೂರ್ಣ ಮತ್ತು ಗಟ್ಟಿಯಾದ ಬರವಣಿಗೆ ಅವರ ವಿಶೇಷತೆ ಎಂದರು.

ಕೆಬಿಜಿ ಧರ್ಮ ಮತ್ತು ತತ್ವಶಾಸ್ತ್ರದ ಆಕರ್ಷಣೆಗೆ ಒಳಗಾದವರು. ನಿರಂತರ ಪ್ರಶ್ನೆಗಳ ಮೂಲಕ ಪರಿಶೋಧಿಸುವ ಗುಣ ಹೊಂದಿದ್ದಾರೆ. ರಜನೀಶ್, ಸ್ವಾಮಿ ಚಿನ್ಮಯಾನಂದ, ಸಿದ್ದೇಶ್ವರ ಸ್ವಾಮೀಜಿ ಮತ್ತು ಆದಿಶಂಕರಾಚಾರ್ಯ ಅವರಂತಹ ಮಹನೀಯರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದರು.
ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ, ಪ್ರಕಾಶಕ ಡಿ.ಎನ್.ಲೋಕಪ್ಪ , ಎಂ.ಚಂದ್ರಶೇಖರ್ ಇತರರಿದ್ದರು.