ನ್ಯೂಸ್

ಕೆನಡಾದಲ್ಲಿ ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆ ಸಂದೇಶ

ಒಟ್ಟಾವಾ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶವನ್ನು ಪ್ರತಿಯೊಂದು ಸಿಗರೇಟ್ ಮೇಲೆ ಮುದ್ರಿಸಲು ಕೆನಡಾ ಸರ್ಕಾರ ನಿರ್ಧರಿಸಿದ್ದು, ಈ ರೀತಿ ಮಾಡಿದ ಜಗತ್ತಿನ ಮೊದಲ ದೇಶವಾಗಿದೆ. ಸಾಮಾನ್ಯವಾಗಿ ಸಿಗರೇಟ್ ಪ್ಯಾಕ್​ಗಳ ಮೇಲೆ ಎಚ್ಚರಿಕೆಯನ್ನು ಮುದ್ರಿಸಲಾಗಿರುತ್ತದೆ. ಆದರೆ ಪ್ಯಾಕ್​ಗಳ ಮೇಲಿನ ಎಚ್ಚರಿಕೆಯು ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿರುವುದರಿಂದ ಕೆನಡಾ ಸರ್ಕಾರ ಈ ತಂತ್ರ ಅಳವಡಿಸಲು ಮುಂದಾಗಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಎರಡು ದಶಕಗಳ ಹಿಂದೆ, ತಂಬಾಕು ಉತ್ಪನ್ನಗಳ ಮೇಲೆ ಗ್ರಾಫಿಕ್ ಫೋಟೊ ಎಚ್ಚರಿಕೆ ಹಾಕುವ ಮೂಲಕ ಹೊಸ ಟ್ರೆಂಡ್ ಆರಂಭಿಸಿದ್ದ ಕೆನಡಾ ಇದೀಗ ಧೂಮಪಾನ ವಿರುದ್ಧ ಜಾಗೃತಿಗೆ ಇನ್ನೊಂದು ನೂತನ ಹೆಜ್ಜೆಯಿಟ್ಟಿದೆ. ಧೂಮಪಾನ-ವಿರೋಧಿ ಸಂದೇಶಗಳು ನಾವೀನ್ಯತೆ ಹಾಗೂ ಸ್ವಲ್ಪ ಮಟ್ಟಿಗೆ ಪರಿಣಾಮವನ್ನೂ ಕಳೆದುಕೊಂಡಿರಬಹುದು. ಈ ಕುರಿತ ಆತಂಕವನ್ನು ನಿವಾರಿಸುವುದು ಅಗತ್ಯ ಎಂದು ಮಾನಸಿಕ ಆರೋಗ್ಯ ಹಾಗು ದುಶ್ಚಟ (ಅಡಿಕ್ಷನ್) ನಿವಾರಣೆ ಖಾತೆ ಸಚಿವ ಕ್ಯಾರೊಲಿನ್ ಬೆನೆಟ್ ಹೇಳಿದ್ದಾರೆ. ಪ್ರತಿ ಸಿಗರೇಟ್ ಮೇಲೆ ಎಚ್ಚರಿಕೆ ಮುದ್ರಿಸುವುದರಿಂದ ಅಗತ್ಯ ಸಂದೇಶ ಜನರಿಗೆ ತಲುಪಲು ನೆರವಾಗುತ್ತದೆ ಎಂದಿದ್ದಾರೆ.