ನ್ಯೂಸ್

ಕೆಜಿಎಫ್ ನಗರದಲ್ಲಿ ಇಂಟಿಗ್ರೇಟೆಡ್ ಟೌನ್‌ಷಿಫ್, ಕೈಗಾರಿಕಾ ವಲಯಕ್ಕೆ ಶೀಘ್ರ ಚಾಲನೆ ನೀಡಿ / ಎಪಿಎಂಸಿಗೆ ೧೦೦ ಕೋಟಿ ಅನುದಾನ ನೀಡಿ / ಸಿಎಂಗೆ ಶಾಸಕಿ ರೂಪಕಲಾ ಶಶಿಧರ್ ಮನವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯ ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಷಿಫ್ ಕಾಮಗಾರಿಗೆ ತ್ವರಿತ ಚಾಲನೆ, ಕೈಗಾರಿಕಾ ವಲಯ ಅಭಿವೃದ್ದಿಗೆ ಶೀಘ್ರ ಆದೇಶ, ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಎಪಿಎಂಸಿ ಸುಸಜ್ಜಿತ ಪ್ರಾಂಗಣ ನಿರ್ಮಾಣಕ್ಕೆ ೧೦೦ ಕೋಟಿ ರೂ ಬಿಡುಗಡೆಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಶಾಸಕಿ ರೂಪಕಲಾ ಶಶಿಧರ್ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿ ಆಗ್ರಹಿಸಿದರು.

ಬುಧವಾರ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ, ಜಿಲ್ಲೆಯ ಕೆ.ಜಿ.ಎಫ್. ನಗರದ ಬಳಿ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಿ, ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಆದೇಶ ಹೊರಡಿಸುವಂತೆ ಮನವಿ ಮಾಡಿದರು.

ಟೌನ್‌ಷಿಫ್‌ಗೆ ಜಾಗ ನೀಡಿದ್ದರೂ, ಟೌನ್‌ಶಿಫ್ ಅಭಿವೃದ್ಧಿ ಯೋಜನೆಗೆ ಯಾವುದೇ ರೀತಿಯ ಚಾಲನೆ ದೊರೆತಿಲ್ಲದಿರುವುದು ಬೇಸರವುಂಟು ಮಾಡಿದೆ. ನಗರಾಭಿವೃದ್ದಿ ಸಚಿವರು ಕಳೆದ ಮಾರ್ಚ್ನಲ್ಲೇ ಚಾಲನೆ ನೀಡುವುದಾಗಿ ತಿಳಿಸಿದ್ದರೂ ಈವರೆಗೂ ಚಾಲನೆ ಸಿಕ್ಕಿಲ್ಲವಾದ್ದರಿಂದ ಜನತೆ ನಮ್ಮನ್ನು ಅನುಮಾನಾಸ್ಪದವಾಗಿ ನೋಡುವಂತಾಗಿದೆ ಎಂದು ತಿಳಿಸಿದರು.

ಕೈಗಾರಿಕಾ ವಲಯ ಅಭಿವೃದ್ದಿಗೆ ಆದೇಶಿಸಿ :

ಕೆಜಿಎಫ್ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಕೆ.ಜಿ.ಎಫ್. ನಗರದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಬಿ.ಇ.ಎಂ.ಎಲ್. ಸಂಸ್ಥೆಯಿAದ ಹಿಂಪಡೆದ ಬಂಗಾರದಗಣಿ ಗ್ರಾಮದ ಸ.ನಂ.೦೨ ರಲ್ಲಿ ೬೬೮ ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ರವರಿಗೆ ಮಂಜೂರು ಮಾಡಲಾಗಿದೆ.

ಈ ಜಮೀನಿನಲ್ಲಿ ಬೃಹತ್ "ಕೈಗಾರಿಕಾ ಟೌನ್‌ಶಿಫ್" ಅಭಿವೃದ್ಧಿಪಡಿಸುವ ಬಗ್ಗೆ ೨೦೨೩-೨೪ ನೇ ಸಾಲಿನ ಆಯವ್ಯಯದಲ್ಲಿ ತಾವು ಘೋಷಿಸಿದ್ದು, ನನ್ನ ಕ್ಷೇತ್ರದ ನಿರುದ್ಯೋಗಿ ವಿದ್ಯಾವಂತ ಯುವ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಬೆಮೆಲ್‌ನಲ್ಲಿ ಉದ್ಯೋಗ ನೇಮಕಾತಿ ಸ್ಥಗಿತಗೊಂಡಿದೆ. ಕೆ.ಜಿ.ಎಫ್. ನಗರದಿಂದ ಸುಮಾರು ೨೫೦೦೦ ಯುವಕ ಮತ್ತು ಯುವತಿಯರು ಬೆಂಗಳೂರು ನಗರ ಹಾಗೂ ಇನ್ನಿತರೆ ಕಡೆ ಉದ್ಯೋಗಕ್ಕಾಗಿ ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು ೨ ವರ್ಷ ಕಳೆದಿದ್ದರೂ ಕೆ.ಐ.ಎ.ಡಿ.ಬಿ. ವತಿಯಿಂದ ನಾಮಫಲಕ ಅಳವಡಿಸಿರುವುದು ಬಿಟ್ಟರೆ ಕೈಗಾರಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ಪ್ರಾರಂಭವಾಗಿಲ್ಲ.

ಇದರಿAದಾಗಿ ಶಾಸಕರ ಘೋಷಣೆಗಳು ಸುಳ್ಳು ಎಂಬ ಅಪಪ್ರಚಾರ ಜತೆಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದ ಪರಿಸ್ಥಿತಿ, ಮುಜುಗರ ತರಿಸಿದೆ. ಈ ಹಿನ್ನಲೆಯಲ್ಲಿ ಶೀಘ್ರ ಆದೇಶ ಹೊರಡಿಸಲು ಮನವಿ ಮಾಡಿದರು.

ಎಪಿಎಂಸಿ ಮಾರುಕಟ್ಟೆಗೆ ೧೦೦ ಕೋಟಿ ಅನುದಾನ ನೀಡಿ :

ಕೆಜಿಎಫ್‌ಗೆ ಎಪಿಎಂಸಿ ಮಾರುಕಟ್ಟೆ ಘೋಷಿಸಿದ್ದರೂ, ಆಯವ್ಯಯದಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ನಿಗದಿಪಡಿಸಿಲ್ಲ. ರೈತರು ತರಕಾರಿ ವಹಿವಾಟಿಗೆ ಇತರೆ ಕಡೆ ಹೋಗುವಂತಾಗಿದೆ, ಈ ಹಿನ್ನಲೆಯಲ್ಲಿ ಎಪಿಎಂಸಿಗೆ ಈಗಾಗಲೇ ೨೫ ಎಕರೆ ಜಾಗ ನೀಡಿದ್ದು, ಸಮತಟ್ಟು ಮಾಡಲಾಗುತ್ತಿದೆ. ಇಲ್ಲಿ ಮಾವು ಮಾರಾಟ ಮಂಡಿ, ಟೊಮಟೋ ಸಂಸ್ಕರಣ ಘಟಕ, ಹಾಗೂ ಆಲೂಗಡ್ಡೆ ಸಂಸ್ಕರಣ ಘಟಕವು ಸಹಾ ಸ್ಥಾಪಿಸಬಹುದಾಗಿದ್ದು, ಇದರಿಂದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದ್ದು, ಸುಸಜ್ಜಿತ ಮಾರುಕಟ್ಟಗೆ ೧೦೦ ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಕೋರಿದರು.

ಕೆಜಿಎಫ್ ಆಸ್ಪತ್ರೆ ಮೇಲ್ದರ್ಜೆಗೇರಿಸಿ :

ಕೆ.ಜಿ.ಎಫ್. ನಗರದಲ್ಲಿ ಸಾರ್ವಜನಿಕ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಬಹುತೇಕವಾಗಿ ಕೂಲಿ ಕಾರ್ಮಿಕರು ಆಸ್ಪತ್ರೆಯ ಮೇಲೆ ಅವಲಂಬಿತರಾಗಿರುತ್ತಾರೆ. ಈ ಆಸ್ಪತ್ರೆಗೆ ಪ್ರತಿ ದಿನ ಸರಾಸರಿ ೮೦೦ ರಿಂದ ೧೦೦೦ ಹೊರ ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ.

ಅಪಘಾತ, ಪ್ರಾಕೃತಿಕ ತೊಂದರೆ, ಹೃದಯಾಘಾತ ಹಾಗೂ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಕೋಲಾರ ಆಥವಾ ಕುಪ್ಪಂ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಿರುತ್ತದೆ ಎರಡೂ ಸ್ಥಳಗಳು ಕ್ರಮವಾಗಿ ೩೦ ಹಾಗೂ ೧೦೦ ಕಿಲೋಮೀಟರ್ ದೂರವಿರುತ್ತವೆ.

ಆದ್ದರಿಂದ ಕೆ.ಜಿ.ಎಫ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ತುರ್ತು ಚಿಕಿತ್ಸಾ ಘಟಕ ಹಾಗೂ ತೀವ್ರ ನಿಘಾ ಘಟಕದ ಅವಶ್ಯಕತೆಯಿದ್ದು, ವಿಶೇಷವಾಗಿ ಹೃದ್ರೋಗ ಸಮಸ್ಯೆಗೆ ತುತ್ತಾಗುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಕೂಡಲೇ ತೀವ್ರ ನಿಗಾ ಘಟಕ ಮಂಜೂರು ಮಾಡಲು ಕೋರಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಅಗತ್ಯ ಅನುದಾನ ಬಿಡುಗಡೆಗೆ ಕೋರಿದರು.

ತಾಲ್ಲೂಕುಮಟ್ಟದ ಕಚೇರಿಗಳು ಅಗತ್ಯ :

ಕೆ.ಜಿ.ಎಫ್. ತಾಲ್ಲೂಕು ಹೊಸದಾಗಿ ರಚನೆಯಾಗಿ ಏಳು ವರ್ಷ ಪೂರ್ಣಗೊಂಡಿದ್ದು, ವಿಶೇಷವಾಗಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗ ಇವುಗಳ ಕಚೇರಿಗಳನ್ನು ಆರಂಭಿಸಲು ಕೋರಿದರು.

ಮನವಿ ನೀಡಿದ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ್, ನಸೀರ್ ಅಹಮದ್, ಶಾಸಕರಾದ ಬಸವರಾಜರಾಯರೆಡ್ಡಿ, ನಂಜೇಗೌಡ, ಕೊತ್ತೂರು ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ ಇದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೨ : ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಷಿಫ್ ಕಾಮಗಾರಿಗೆ ತ್ವರಿತ ಚಾಲನೆ, ಶೀಘ್ರ ಕೈಗಾರಿಕಾ ವಲಯ ಅಭಿವೃದ್ದಿಗೆ ಶೀಘ್ರ ಆದೇಶ, ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಎಪಿಎಂಸಿ ಸುಸಜ್ಜಿತ ಪ್ರಾಂಗಣ ನಿರ್ಮಾಣಕ್ಕೆ ೧೦೦ ಕೋಟಿ ರೂ ಬಿಡುಗಡೆಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಶಾಸಕಿ ರೂಪಕಲಾ ಶಶಿಧರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆಗ್ರಹಿಸಿದರು.