ಕೋಲಾರ: ಕೆಐಎಡಿಬಿ ಭೂಮಿ ಮಂಜೂರಾಗಿ ಮೂರು ವರ್ಷ ಕಳೆದರೂ ಕೈಗಾರಿಕೆಗಳನ್ನು ಸ್ಥಾಪಿಸದಿದ್ದರೆ, ಮಂಜೂರು ಮಾಡಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡಿ, ಆ ಜಾಗಗಳನ್ನು ಕೈಗಾರಿಕೆಗಳನ್ನು ಆರಂಭಿಸುವವರಿಗೆ ಮಂಜೂರು ಮಾಡಿ ಎಂದು ಸಂಸದ ಎಸ್.ಮುನಿಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕೈಗಾರಿಕೆಗಳಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೆಐಎಡಿಬಿಗೆ ಅರ್ಜಿ ಸಲ್ಲಿಸಿ ಕೈಗಾರಿಕೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಜಾಗ ಪಡೆದು ಬಳಿಕ ಅದನ್ನು ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ದಂಧೆಗಳನ್ನು ಕೆಲವು ನಕಲಿ ಕೈಗಾರಿಕೊದ್ಯೋಮಿಗಳು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿಗೆ ಮತ್ತು ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸಮೀಪ ಇದ್ದರೂ ಜಿಲ್ಲೆ ಅಭಿವೃದ್ಧಿ ಕಾಣದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಎಲ್ಲ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರದ ಅಧಿಕಾರಿ ಷರೀಫ್ ಮಾತನಾಡಿ, ಈಗಾಗಲೇ ಕೆಲವು ಕೈಗಾರಿಕೋದ್ಯಮಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ 4 ತಿಂಗಳು ಕಾಲಾವಕಾಶ ಕೋರಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ 8 ತಾಲೂಕುಗಳಲ್ಲಿ ಸರ್ಕಾರಿ ಜಾಗವನ್ನು ಕನಿಷ್ಠ 100ರಿಂದ 150 ಎಕರೆ ಗುರುತಿಸುವ ಕೆಲಸವನ್ನು ಕಂದಾಯ ಇಲಾಖೆಗಳು ಮಾಡಿದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಲಾಗುವುದು. ಇದನ್ನು ಕಡಿಮೆ ಬೆಲೆಗೆ ನೀಡಿದಲ್ಲಿ ಹೆಚ್ಚಿನ ಕೈಗಾರಿಕೆಗಳು ಬರಲು ಸಾಧ್ಯವಾಗುತ್ತದೆ. ಮುಂದೆ ಕೋಲಾರ ಜಿಲ್ಲೆಯನ್ನು ಕೈಗಾರಿಕೆ ನಗರವನ್ನಾಗಿ ಗುರುತಿಸುವಂತಾಗಬೇಕು ಎಂದರು.
ಒಂದೇ ಜಾತಿಯ 23 ಮಂದಿಗೆ ಭೂಮಿ ಮಂಜೂರು: ಒಂದೇ ಜಾತಿಯ 23 ಮಂದಿಗೆ ಕೈಗಾರಿಕೆ ಸ್ಥಾಪನೆಗಾಗಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಎಜಿಎಂ ಆಗಿದ್ದ ಸಂದರ್ಭದಲ್ಲಿ ಸಿ.ಜೆ.ಶ್ರೀನಿವಾಸ್ ಎಂಬುವರು ಜಾಗ ಮಂಜೂರು ಮಾಡಿದ್ದಾರೆ. ಯಾವ ಆಧಾರದ ಮೇಲೆ ಮಂಜೂರು ಮಾಡಿದ್ದಾರೆ? ಇಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ? ಎಂದು ಪ್ರಶ್ನಿಸಿದ ಸಂಸದರು, ಅವರು ಎಸ್.ಸಿ, ಎಸ್.ಟಿ ಜನಾಂಗದವರು ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋಲಾರದಲ್ಲಿ ಇದ್ದಾರೆ. ಅಂದಾಜು 4 ಲಕ್ಷ ಮಂದಿ ಇದ್ದಾರೆ. ಎಸ್.ಸಿ, ಎಸ್.ಟಿ ಮೀಸಲಾತಿಯಲ್ಲೂ ನೂರಾರು ಉಪ ಪಂಗಡಗಳು ಇರುವಾಗ ಒಂದೇ ಜಾತಿಯವರಿಗೆ ಹೇಗೆ ನೀಡಿದ್ದಾರೆ. ಇದರ ಪಟ್ಟಿ ನೀಡಿ, ಈ ಬಗ್ಗೆ ತನಿಖೆ ಮಾಡಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಡಿಮೆ ಹಣಕ್ಕೆ ಭೂಮಿ ಪಡೆದು ಮಾರಾಟ: ಕೋಲಾರದಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಪ್ರತಿದಿನ 25 ಸಾವಿರ ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರಿಗೆಲ್ಲ ನೆಮ್ಮದಿ ಜೀವನ ಕಲ್ಪಿಸಲು ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಬೇಕಿದೆ. ಕೈಗಾರಿಕೆ ಭೂಮಾಫಿಯಾಗಳು ರೈತರಿಂದ ಒಂದು ಎಕರೆಗೆ 3ರಿಂದ 4 ಲಕ್ಷ ರೂ.ಗಳಿಗೆ ಭೂಮಿ ಪಡೆದು ಇಂದು 2.5 ರಿಂದ 3 ಕೋಟಿ ರೂಪಾಯಿಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ವೇಮಗಲ್ ವ್ಯಾಪ್ತಿಯಲ್ಲಿ ರೈತರ ಭೂಮಿ ಎಕರೆಗೆ 30&40 ಲಕ್ಷ ರೂ.ಗಳಿಂದ 1.70 ಕೋಟಿ ರೂ. ಗಳಾಗಿದೆ ಎಂದು ಸಂಸದರು ಕಳವಳ ವ್ಯಕ್ತಪಡಿಸಿದರು.
ಹೂಡಿಕೆದಾರರು ವಾಪಸ್ ಆಗುತ್ತಿದ್ದಾರೆ: ಕಾರ್ಖಾನೆ ಸ್ಥಾಪನೆಗೆ 67 ಮಂದಿಗೆ ಇನ್ನೂ ಜಾಗ ಮಂಜೂರಾಗಿಲ್ಲ. ಇದರಿಂದ ಜಿಲ್ಲೆಗೆ ಬರಲು ಮುಂದಾಗಿದ್ದ ಕೈಗಾರಿಕೆಗಳು ವಾಪಸ್ ಆಗುತ್ತಿವೆ. ಟಾಟಾ ಕಂಪನಿಗೆ 300 ಎಕರೆ ಜಾಗ ಬೇಕಾಗಿತ್ತು, ಆದರೆ ಇಲ್ಲಿನ ಬೆಲೆಗಳನ್ನು ಕೇಳಿ ವಾಪಸಾಗಿದೆ. ನವದೆಹಲಿಯಲ್ಲಿ ಇತ್ತೀಚೆಗೆ 80 ಕೈಗಾರಿಕೆಗಳ ಸಭೆ ಕರೆಯಲಾಗಿತ್ತು. 56 ಹೊಡಿಕೆದಾರರು ಬಂದಿದ್ದರು. ಅವರಿಗೆ ಕೋಲಾರ ಜಿಲ್ಲೆಗೆ ಬರಲು ಆಹ್ವಾನಿಸಲಾಗಿದೆ. ನೆರೆ ರಾಜ್ಯದ ಅನಂತಪುರ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಉಚಿತ ಭೂಮಿ, ಉಚಿತ ನೀರು ಕೊಡುತ್ತಾರೆ. ಆದರೆ ಉದ್ಯೋಗ ಮಾತ್ರ ಸ್ಥಳಿಯರಿಗೆ ನೀಡಬೇಕೆಂಬ ಕರಾರು ಮಾಡಿಕೊಳ್ಳುತ್ತಾರೆ ಎಂದು ಸಂಸದರು ಉದಾಹರಣೆ ನೀಡಿದರು.
ಜನವರಿಯಲ್ಲಿ ಉದ್ಯೋಗ ಮೇಳ: ಜನವರಿಯೊಳಗೆ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಮೇಳ ಆಯೋಜಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ. ಮೇಳದಲ್ಲಿ ಸುಮಾರು 100ರಿಂದ 150 ಕೈಗಾರಿಕೆಗಳು ಭಾಗವಹಿಸುವಂತಾಗಬೇಕು. ಕೋಲಾರ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಮೂರು ಜಿಲ್ಲೆಗಳ ಕೈಗಾರಿಕೆಗಳನ್ನು ಆಹ್ವಾನಿಸಬೇಕು. ಸುಮಾರು 10 ಸಾವಿರ ನಿರುದ್ಯೋಗಿಗಳಿಗೆ ಕೆಲಸ ಸಿಗುವಂತಾಗಬೇಕು. ಉದ್ಯೋಗ ಮೇಳದ ಅಂತಿಮ ದಿನದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲೇ ಉದ್ಯೋಗದ ಆದೇಶದ ಪತ್ರ ವಿತರಿಸುವ ವ್ಯವಸ್ಥೆ ಮಾಡಬೇಕಿದೆ. ನಗರದ ಜೂನಿಯರ್ ಕಾಲೇಜಿನ ಮೈದಾನವು ಉದ್ಯೋಗ ಮೇಳಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಸಂಸದರು ತಿಳಿಸಿದರು.