ನ್ಯೂಸ್

ಕೆಎಲ್‌ಇ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿ ಶಸಚಿಕಿತ್ಸೆ

ಬೆಳಗಾವಿ: ರಕ್ತನಾಳ ಮುದುಡಿಕೊಂಡು ಮಿದುಳಿಗೆ ರಕ್ತ ಸಂಚಾರ ತಡೆಹಿಡಿಯುವ ಮೋಯಾ ಮೋಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ತಲೆನೋವು, ಮುಖ, ತೋಳು ಅಥವಾ ಕಾಲಿನ ದೌರ್ಬಲ್ಯದಿಂದ ಬಳಲುತ್ತಿದ್ದ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ 40 ವರ್ಷದ ಮಹಿಳೆಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಮೋಯಾ ಮೋಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಜೀವಕ್ಕೆ ಅಪಾಯವಿದೆ ಎಂದು ಅರಿತ ವೈದ್ಯರು ಸತತ 6 ಗಂಟೆ ಶಸ್ತ್ರಚಿಕಿತ್ಸೆ ನೆರವೇರಿಸಿ ಮಹಿಳೆಯನ್ನು ಬದುಕಿಸಿದ್ದಾರೆ. ಕೇವಲ ಮೂರೇ ದಿನದಲ್ಲಿ ರೋಗಿಯು ಚೇತರಿಸಿಕೊಂಡಿದ್ದಾರೆ.

ಏನಿದು ಮೋಯಾ ಮೋಯಾ?: ಮೋಯಾ ಮೋಯಾ ಎಂಬುದು ಅಪರೂಪದ ರಕ್ತನಾಳ ಕಾಯಿಲೆಯಾಗಿದ್ದು, ಮಿದುಳಿನಲ್ಲಿರುವ ರಕ್ತನಾಳಗಳು ಮುದುಡಿಕೊಂಡು ರಕ್ತಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಜಪಾನ್‌ನಲ್ಲಿ 1960ರಲ್ಲಿ ಈ ಕಾಯಿಲೆ ಕಂಡು ಬಂದರೆ, ಭಾರತದಲ್ಲಿ 1983ರಲ್ಲಿ ಕಂಡುಬಂದಿತು. ಮೋಯಾ ಮೋಯಾ ಎಂಬುದು ಜಪನೀಸ್ ಭಾಷೆಯಾಗಿದೆ.

ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಮುಖ್ಯವಾಗಿ ಪಾರ್ಶ್ವವಾಯು, ರಕ್ತಸ್ರಾವ, ಮರೆಗುಳಿತನ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ವಯಸ್ಕರಲ್ಲಿ ಮೋಯಾ ಮೋಯಾ ಕಾಯಿಲೆ ಬಹಳ ಅಪರೂಪವಾಗಿದ್ದು, ಮಿದುಳಿನ ರಕ್ತ ಪೂರೈಕೆ ನಾಳದ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ. ನಾಶಗೊಂಡ ರಕ್ತನಾಳಕ್ಕೆ ಪರ್ಯಾಯವಾಗಿ ತೆರೆದ ಶಸ್ತ್ರಚಿಕಿತ್ಸೆ ಮೂಲಕ ನೇರವಾದ ಹೊಸ ರಕ್ತನಾಳವನ್ನು ಸೃಷ್ಟಿಸಿ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗುತ್ತದೆ ಎಂದು ಆಸ್ಪತ್ರೆ ನರಶಸ್ತ್ರಚಿಕಿತ್ಸಕ ಡಾ. ಅಭಿಷೇಕ ಪಾಟೀಲ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಅಭಿಷೇಕ ಪಾಟೀಲ ಅವರಿಗೆ ಅರಿವಳಿಕೆ ತಜ್ಞವೈದ್ಯ ಡಾ. ಟೀನಾ ದೇಸಾಯಿ, ಸ್ಥಾನಿಕ ವೈದ್ಯ ಡಾ. ಆದಿತ್ಯಾ ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯಕೀಯ ತಂಡಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ. ಎಂ.ದಯಾನಂದ ಅಭಿನಂದಿಸಿದ್ದಾರೆ.