K.H.Muniyappa 
ನ್ಯೂಸ್

ಕೆಎಚ್​ ಮುನಿಯಪ್ಪ ನಡೆ ಏನು?: 30 ವರ್ಷ ಸಂಸದರಾಗಿದ್ದ ಕೆಎಚ್​ರನ್ನು ದೂರವಿಟ್ಟು ಕೊತ್ತೂರು, ಸುಧಾಕರ್​ ಸೇರ್ಪಡೆ

ಕೋಲಾರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಕೆ.ಎಚ್​.ಮುನಿಯಪ್ಪ ಜಿಲ್ಲೆಯಲ್ಲಿ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದು, ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣ ಸದೃಢವಾಗುತ್ತಿದೆ. ಮಾಜಿ ಶಾಸಕರಾದ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್​, ಮುಳಬಾಗಿಲಿನ ಕೊತ್ತೂರು ಮಂಜುನಾಥ್​ ಮೂರು ದಿನದ ಹಿಂದೆ ಕಾಂಗ್ರೆಸ್​ ಸೇರ್ಪಡೆಯಾದ ಮೇಲಂತೂ ಕುದಿದು ಹೋಗಿರುವ ಮುನಿಯಪ್ಪ ಮುಂದಿನ ದಿನಗಳಲ್ಲಿ ಯಾವ ತೀಮಾರ್ನ ತೆಗೆದುಕೊಳ್ಳುತ್ತಾರೆ ಎಂಬುದರತ್ತ ರಾಜಕೀಯ ಚಿತ್ತ ನೆಟ್ಟಿದೆ.


ಕಳೆದ ಬಾರಿ ಎಸ್​.ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದ ಕೊತ್ತೂರು, ಸುಧಾಕರರೆಡ್ಡಿ ಪಕ್ಷ ಸೇರ್ಪಡೆ ವಿರುದ್ಧ ಸೆಟೆದು ನಿಂತಿರುವ ಕೆಎಚ್​, ನಮ್ಮನ್ನು ರ್ನಿಲಕ್ಷಿಸಿದರೆ ನಮ್ಮ ದಾರಿ ನಮಗೆ ಎಂಬ ಸಂದೇಶವನ್ನು ಹೈಕಮಾಂಡ್​ಗೆ ರವಾನಿಸಿದ್ದಾರೆ. "ರ್ನಿಲಕ್ಷ್ಯ'ವನ್ನು ತಿಂಗಳೊಳಗೆ ಸರಿಪಡಿಸಲು ಗಡುವು ವಿಧಿಸಿದ್ದಾರೆ. ಆದರೆ ಏಳು ಬಾರಿ ಸೋಲಿಲ್ಲದ ಸರದಾರ ಎಂದು ಗೆದ್ದು ಬೀಗಿದ್ದ ಮುನಿಯಪ್ಪ ಪರ ಹಾಲಿ ಶಾಸಕರು, ವಿಧಾನಪರಿಷತ್​ ಸದಸ್ಯರು, ಜಿಪಂ, ತಾಪಂ ಸದಸ್ಯರೂ ಸೇರಿ ಬಹುತೇಕ ಜನಪ್ರತಿನಿಧಿಗಳು ನಿಲ್ಲದಿರುವಾಗ ಅವರ ಮಾತನ್ನು ಹೈಕಮಾಂಡ್​ ಅಥವಾ ರಾಜ್ಯ ನಾಯಕತ್ವ ಪರಿಗಣಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.


ಕಾಂಗ್ರೆಸ್​ ಎಐಸಿಸಿ ಕಾರ್ಯಕಾರಿಣಿ ಕಾಯಂ ಸದಸ್ಯ, 2 ಬಾರಿ ಕೇಂದ್ರ ಸಚಿವ, 7 ಬಾರಿ ಸಂಸದರಾಗಿದ್ದ ದಲಿತ ಮುಖಂಡ ಕೆ.ಎಚ್​.ಮುನಿಯಪ್ಪ ಅವರನ್ನು ಕಾಂಗ್ರೆಸ್​ ಒಂದು ಬಾರಿ ಸೋತೊಡನೆ ಈ ಪರಿ ಕಡೆಗಣನೆ ಮಾಡುತ್ತದೆ ಎಂದರೆ ಅದಕ್ಕೆ ಬಲವಾದ ಕಾರಣಗಳಿವೆ. ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣವು ಮುನಿಯಪ್ಪ ಪಾತ್ರ ಪಕ್ಷ ಕಟ್ಟುವುದರಲ್ಲಿ ಏನಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿರುವುದೇ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿರುವುದರ ಹಿಂದಿನ ರಹಸ್ಯ ಎನ್ನಲಾಗುತ್ತಿದೆ.


ತಮ್ಮ ಗೆಲುವಿಗೆ ತಂತ್ರಗಾರಿಕೆ ಮಾಡುತ್ತಿದ್ದ ಮುನಿಯಪ್ಪ, ಶಾಸಕರು, ವಿಧಾನಪರಿಷತ್​ ಸದಸ್ಯರ ಚುನಾವಣೆಗಳಲ್ಲಿ ಅವರನ್ನು ಸೋಲಿಸಲು ಯತ್ನಿಸುತ್ತಿದ್ದರು. ಬಿಜೆಪಿ ಜಿಲ್ಲೆಯಲ್ಲಿ ತಲೆಯೆತ್ತಲು ಕೆ.ಎಚ್​.ಮುನಿಯಪ್ಪ ಕಾರಣರಾಗಿದ್ದಾರೆ. ಈ ಹಿಂದೆ ಮಾಲೂರಿನಲ್ಲಿ 18 ವರ್ಷ ಕಾಂಗ್ರೆಸ್​ ಜಿಲ್ಲಾಧ್ಯಕ್ಷರಾಗಿದ್ದ ಎ.ನಾಗರಾಜು ಅವರನ್ನು ಸೋಲಿಸಲು ಬಿಜೆಪಿಯ ಕೃಷ್ಣಯ್ಯಶೆಟ್ಟಿ ಅವರನ್ನು ಪರೋಕ್ಷವಾಗಿ ಬೆಂಬಲಿಸಿದರು. 2004ರಲ್ಲಿ ಬಂಗಾರಪೇಟೆಯಲ್ಲಿ ಎಂ.ನಾರಾಯಣಸ್ವಾಮಿಗೆ ಟಿಕೆಟ್​ ತಪ್ಪಿಸಿ ರಾಮಚಂದ್ರಪ್ಪಗೆ ಕೊಡಿಸಿ ಪಕ್ಷದ ಸೋಲಿಗೆ ಕಾರಣರಾಗಿದ್ದರಲ್ಲದೆ, ಬಿಜೆಪಿಯ ವೆಂಕಟಮುನಿಯಪ್ಪ ಗೆಲುವಿಗೆ ಕಾರಣರಾದರು.

2008ರಲ್ಲಿ ಕೆಜಿಎಫ್​ ಕ್ಷೇತ್ರದಲ್ಲಿ ಎನ್​ಎಸ್​ಯುಐನ ಶ್ರೀನಿವಾಸ್​, 2013ರಲ್ಲಿ ಶಂಕರ್​ಗೆ ಕಾಂಗ್ರೆಸ್​ ಟಿಕೆಟ್​ ಕೊಟ್ಟಿದ್ದು, ಪುತ್ರಿ ರೂಪಾ ಶಶಿಧರ್​ಗೆ ಟಿಕೆಟ್​ ಕೊಡಲಿಲ್ಲವೆಂದು ಬಿಜೆಪಿ ಸಂಪಂಗಿ ಗೆಲ್ಲಲು ಕಾರಣರಾದರು. ಜಿಲ್ಲೆಯಲ್ಲಿ ಕಾಂಗ್ರೆಸ್​ಗೆ ಎದುರಾಳಿ ಜನತಾಪರಿವಾರವಾಗಿದ್ದು, ಬಿಜೆಪಿ ಪೋಷಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಗೆಲುವು ಸುಲಭ ಎಂದು ಭಾವಿಸಿ ಮುನಿಯಪ್ಪ ಈ ತಂತ್ರ ಅನುಸರಿಸಿದರು ಎಂಬುದನ್ನು ರಮೇಶ್​ಕುಮಾರ್​ ಬಣ ಹೈಕಮಾಂಡ್​ಗೆ ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.

3 ಕಡೆ ಪಕ್ಷ ಅಸ್ತಿತ್ವ ಕಳೆದುಕೊಂಡಿದ್ದೇಕೆ?: ಚಿಂತಾಮಣಿ, ಕೋಲಾರ, ಮುಳಬಾಗಿಲಿನಲ್ಲಿ ಪಕ್ಷ ಅಸ್ಥಿತ್ವ ಕಳೆದುಕೊಳ್ಳಲು ಕೆ.ಎಚ್​.ಮುನಿಯಪ್ಪ ಕಾರಣ. ಮುಳಬಾಗಿಲಿನಲ್ಲಿ 2013ರಲ್ಲಿ ಕೆಎಚ್​ ಟಿಕೆಟ್​ ತಪ್ಪಿಸಿದ್ದರಿಂದ ಕೊತ್ತೂರು ಮಂಜುನಾಥ್​ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. 2018ರಲ್ಲಿ ಕಾಂಗ್ರೆಸ್​ ಅಭ್ಯರ್ಥಿಯೇ ಇರಲಿಲ್ಲ. ಈಗಲೂ ಕಾಂಗ್ರೆಸ್​ ಶಾಸಕರಿಲ್ಲ. ಚಿಂತಾಮಣಿಯಲ್ಲಿ 2008 ಮತ್ತು 13ರಲ್ಲಿ ಡಾ.ಎಂ.ಸಿ.ಸುಧಾಕರ್​ ಕಾಂಗ್ರೆಸ್​ನಿಂದ ಗೆದ್ದಿದ್ದು ಬಿಟ್ಟರೆ ಮತ್ತೆ ಕಾಂಗ್ರೆಸ್​ ಅಲ್ಲಿ ತಲೆ ಎತ್ತಿಲ್ಲ. ಕೋಲಾರದಲ್ಲಿ 2004ರಲ್ಲಿ ಶ್ರೀನಿವಾಸಗೌಡರು ಕಾಂಗ್ರೆಸ್​ ಸೇರಿ ಗೆದ್ದಿದ್ದರಾದರೂ, ನಾನು ಯಾವ ಚಿಹ್ನೆ ಮೇಲೆ ಸ್ಪರ್ಧಿಸಿದರೂ ಗೆಲ್ಲುತ್ತೇನೆ ಎಂದಿದ್ದರು. ನಂತರ ಆರು ಚುನಾವಣೆಗಳಲ್ಲಿ ಕೋಲಾರದಲ್ಲಿ ಕೈಗೆ ಮತದಾರರು ಒಲವು ತೋರಲಿಲ್ಲ. ಹಾಗಾದರೆ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲ್ಲುವುದು ಬೇಡವೇ. ಕೆ.ಎಚ್​ ಸಂಸದರಾಗಿದ್ದಾಗ ಈ ಕಡೆ ಪಕ್ಷ ಗೆಲ್ಲಿಸಲು ಏಕೆ ಯತ್ನಿಸಲಿಲ್ಲ ಎಂಬುದನ್ನು ಹೈಕಮಾಂಡ್​ ಗಮನಕ್ಕೆ ತರಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.


ತ್ರಿಕೋನ ಸ್ಪರ್ಧೆಗಿಳಿದು ಬಿಜೆಪಿ ಬೆಳೆಸಿದರು: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೆ.ಎಚ್​.ಮುನಿಯಪ್ಪ ಎಂಟೂ ಕ್ಷೇತ್ರಗಳಲ್ಲಿ ಪಕ್ಷದ ಗೆಲ್ಲುವ ಅಭ್ಯರ್ಥಿಗಳ ವಿರುದ್ಧ ಮತ್ತೊಂದು ಗುಂಪನ್ನು ಎತ್ತಿ ಕಟ್ಟಿ ಅದರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್​ ಕೊಡಿಸುತ್ತಿದ್ದರು. ಅವರ ಪ್ರಭಾವ ದಿನೇದಿನೆ ಕುಸಿಯುತ್ತಿದ್ದುದರಿಂದ ಜನತಾ ಪರಿವಾರದ ಜತೆಗೆ ಬಿಜೆಪಿ ಬಲಿಷ್ಠವಾದರೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಗೆಲುವು ಸುಲಭ ಎಂದು ಭಾವಿಸಿದ್ದರು. ಆದರೆ ಅವರಿಂದ ತುಳಿತಕ್ಕೆ ಒಳಗಾದವರೆಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುಗಿಬಿದ್ದಿದ್ದರಿಂದ ಅವರು ಸೋಲುಣ್ಣಬೇಕಾಯಿತು ಎಂಬುದು ಘಟಬಂಧನ್​ ನಾಯಕರ ಪ್ರಮುಖ ವಾದವಾಗಿದೆ. ಇದನ್ನು ರಾಜ್ಯ, ರಾಷ್ಟ್ರನಾಯಕರು ಗ್ರಹಿಸಿರುವುದರಿಂದ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಕಟ್ಟಾ ಬೆಂಬಲಿಗರೂ ಬೆಂಬಲಿಸಲಿಲ್ಲ: ಕಾಂಗ್ರೆಸ್​ ಕಟ್ಟಾಳುಗಳು, ಕೆ.ಎಚ್​.ಮುನಿಯಪ್ಪ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಬಂಗಾರಪೇಟೆಯ ಎಸ್​.ಎನ್​.ನಾರಾಯಣಸ್ವಾಮಿ, ಎಂಎಲ್​ಸಿ ಅನಿಲ್​ ಕುಮಾರ್​, ನಸೀರ್​ ಅಹ್ಮದ್​, ಅಷ್ಟೇ ಏಕೆ ಕೆ.ಎಚ್​.ಮುನಿಯಪ್ಪ ಪುತ್ರಿ ಕೆಜಿಎಫ್​ ಶಾಸಕಿ ರೂಪಾ ಶಶಿಧರ್​ ಸಹ ಪ್ರಸ್ತುತ ಅವರ ಬೆಂಬಲಕ್ಕೆ ನಿಂತಿಲ್ಲ. ಇದು ಮುನಿಯಪ್ಪ ಅವರ ಬೇಸರಕ್ಕೆ ಕಾರಣವಾಗಿದ್ದು, ತಂತ್ರ ಪ್ರತಿತಂತ್ರ ಹೆಣೆಯುವುದರಲ್ಲಿ ನಿಪುಣರಾಗಿರುವ ಕೆ.ಎಚ್​.ಮುನಿಯಪ್ಪ ಜೆಡಿಎಸ್​ ವರಿಷ್ಠ ದೇವೇಗೌಡರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು, ಒಂದು ವೇಳೆ ಕಾಂಗ್ರೆಸ್​ ಹೈಕಮಾಂಡ್​ ಕಡೆಗಣನೆ ಮುಂದುವರಿಸಿದರೆ ಜೆಡಿಎಸ್​ನತ್ತ ಚಿತ್ತ ಹರಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಕಾಂಗ್ರೆಸ್​ ತಮ್ಮೆಲ್ಲ ವಿರೋಧಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಅವರ ನಡೆ ಮತ್ತು ತಂತ್ರಗಾರಿಕೆ ಇರುತ್ತದೆ ಎಂದರೂ ಆಶ್ಚರ್ಯಪಡಬೇಕಾಗಿಲ್ಲ.