ನ್ಯೂಸ್

ಕೆಂಪೇಗೌಡ ವಂಶಸ್ಥರ ಸಂಶೋಧನೆ ಅವಶ್ಯ

ಪ್ರಪಂಚದ ಭೂಪಟದಲ್ಲಿ ಬೆಂಗಳೂರು ನಗರ ಪ್ರಮುಖವಾಗಿ ಗುರುತಿಸಿಕೊಳ್ಳಲು ಕೆಂಪೇಗೌಡರು ಕಾರಣ. ಕೆಂಪೇಗೌಡರನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿಯೂ ಕೆಂಪೇಗೌಡ ಜಯಂತಿ ಆಚರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಿಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ವತಿಯಿಂದ ಗುರುವಾರ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಂಪೇಗೌಡ ಒಕ್ಕಲಿಗ ಸಮುದಾಯದಲ್ಲಿ ಜನಿಸಿದರೂ ಅವರು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದರು. ಅವರು ಕೈಗೊಂಡ ಜನಪರ ಕಾರ್ಯಗಳ ಮೂಲಕ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಬೆಂಗಳೂರು ಮಾದರಿ ನಗರವಾಗಿ ಬೆಳೆಯಲು ಕೆಂಪೇಗೌಡರು ಕಾರಣ. ಕೆರೆಗಳು, ದೇವಾಲಯ, ಪೇಟೆಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದರು. ಅವರು ನಿರ್ಮಾಣ ಮಾಡಿದ ಕೆರೆಗಳು ಇಂದಿಗೂ ಇವೆ ಎಂದರು.

ಕೆಂಪೇಗೌಡರು ಕಟ್ಟಿದ ಬೆಂಗಳೂರಿನಿಂದ ಬೃಹದಾಕಾರವಾಗಿ ಬೆಳೆದಿದೆ. ಎಲ್ಲ ಜನಾಂಗದವರಿಗೆ ಆಗಿನ ಕಾಲದಲ್ಲಿ ಸರಿ ಸಮಾನರಾಗಿ ಬಾಳುವಂತೆ ಬೆಂಗಳೂರಿನಲ್ಲಿ ನಾನಾ ಪೇಟೆಗಳನ್ನು ನಿರ್ಮಿಸಿ ಎಲ್ಲರ ಬಾಳಿನ ಬದುಕಿಗೆ ಹಸನಾದರು. ಅವರು ಬೆಂಗಳೂರು ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಆಗಬೇಕು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಆಡಳಿತ ನಡೆಸಿದ ಕೆಂಪೇಗೌಡ ಹಾಗೂ ಅವರ ವಂಶಸ್ಥರ ಕುರಿತು ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಡಾ.ನಾಗರಾಜ್ ವಿ. ಬೈರಿ, ಮನೋವೈದ್ಯ ಡಾ.ಬಿ.ಎನ್.ರವೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, ಎಂ. ಚಂದ್ರಶೇಖರ್, ಅಖಿಲ ಕರ್ನಾಟಕ ಒಕ್ಕಲಿಗ ಮಹಾಸಭದ ಅಧ್ಯಕ್ಷ ಎನ್.ಬೆಟ್ಟೇಗೌಡ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಬಿ.ಸಿ. ಲಿಂಗರಾಜು, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಈ.ಸಿ. ನಿಂಗರಾಜೇಗೌಡ ಇತರರು ಇದ್ದರು.