ನ್ಯೂಸ್

ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ

ಮದ್ದೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಪ್ರಸಕ್ತ ವರ್ಷವು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು.

ಪಟ್ಟಣದ ತಾಲೂಕು ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮೇಲಿನ ನಿರ್ಣಯ ಅಂಗೀಕರಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ವೇಳೆ ಹಾಜರಿದ್ದ ಸ್ಥಳೀಯ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಕೈಗೊಳ್ಳಬೇಕಾದ ಸಿದ್ದತೆ ಬಗ್ಗೆ ಚರ್ಚಿಸಿದರು.

ಕಾರ್ಯಕ್ರಮ ದಿನದಂದು ಪಟ್ಟಣದ ಕೋಟೆ ಬೀದಿಯ ಉಗ್ರ ನರಸಿಂಹ ದೇವಾಲಯ ಆವರಣದಿಂದ ಸ್ಥಬ್ದ ಚಿತ್ರಗಳ ಅಲಂಕೃತ ಮೆರವಣಿಗೆಯಲ್ಲಿ ಕೆಂಪೇಗೌಡ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿರಿಸಿ ವಿವಿಧ ಕಲಾ ಪ್ರಕಾರಗಳ ಜತೆ ಪೇಟೆ ಬೀದಿಯ ಮೂಲಕ ಮೆರವಣಿಗೆ ಹೊರಟು ಕಾರ್ಯಕ್ರಮದ ಸ್ಥಳ ತಾಲೂಕು ಕ್ರೀಡಾಂಗಣಕ್ಕೆ ತೆರಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆ ಅಧಿಕಾರಿಗಳಿಗೆ ಅಂದು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಮತ್ತು ಇತರ ಸಿದ್ಧತೆಗಳ ಕುರಿತಾಗಿ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಸೂಚನೆ ನೀಡುವ ಜತೆಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಕಾರ ಕೋರಿದರಲ್ಲದೆ ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲು ತೀರ್ಮಾನಿಸಲಾಯಿತು.

ತಾಲೂಕು ಯೋಜನಾಧಿಕಾರಿ ಸುರೇಶ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ, ಪದಾಧಿಕಾರಿಗಳಾದ ಹಾಗಲಹಳ್ಳಿ ಬಸವರಾಜು, ನ.ಲಿ.ಕೃಷ್ಣ, ಜನಾರ್ಧನ್, ಚನ್ನಸಂದ್ರ ಲಕ್ಷ್ಮಣ್, ವೆಂಕಟಚಲುವಯ್ಯ, ಮಹದೇವು, ನಿಂಗಯ್ಯ, ರಾಚಪ್ಪಾಜಿ, ಆನಂದಾಚಾರ್, ಬಸವರಾಜು ಇತರರಿದ್ದರು.