ನ್ಯೂಸ್

ಕೆಂಪೇಗೌಡ ಜಯಂತಿ ಅದ್ದೂರಿ ಆಚರಣೆ; ಪೂರ್ವಭಾವಿ ಸಭೆಯಲ್ಲಿ ತೀರ್ಮಾನ, ಸಚಿವ ಎಂಟಿಬಿ ಅಧ್ಯಕ್ಷತೆಯಲ್ಲಿ ಸಭೆ

ಹೊಸಕೋಟೆ: ಜೂ.27ರಂದು ಅದ್ದೂರಿಯಾಗಿ ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸೂಚಿಸಿದರು.

ಮಂಗಳವಾರ ಗರುಡಾಚಾರ್‌ಪಾಳ್ಯದ ಸಚಿವರ ಗೃಹಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ಜಯಂತಿ ಆಚರಣೆಗೆ ತಡೆಯಾಗಿತ್ತು. ಈ ಬಾರಿ ನಾಡಪ್ರಭುಗಳಿಗೆ ಗೌರವ ನಮನ ಸಲ್ಲಿಸುವ ಸಲುವಾಗಿ ಅದ್ದೂರಿಯಾಗಿ ಜಯಂತಿ ಆಚರಣೆಯಾಗಬೇಕು, ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಸೇರಿ ಎಲ್ಲ ಸಮುದಾಯದ ಜನರು ಒಗ್ಗಟ್ಟಿನಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಬೇಕು ಎಂದು ಬಿಬಿಎಂಪಿ ಮಾಜಿ ಸದಸ್ಯ ಬಿ.ಎನ್.ನಿತೀಶ್‌ಪುರುಷೋತ್ತಮ್ ಹೇಳಿದರು.

ಮೆರವಣಿಗೆ: ಅಂದು ಬೆಳಗ್ಗೆ 9 ಗಂಟೆಗೆ ಹೊಸಕೋಟೆ ಕೆಇಬಿ ವೃತ್ತದಿಂದ ಕೆಂಪೇಗೌಡರ ಭಾವಚಿತ್ರವಿರುವ ರಥಗಳೊಂದಿಗೆ ಹಾಗೂ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಹಳೇ ಬಸ್ ನಿಲ್ದಾನದ ಬಳಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ನಡೆಸುವುದು ಬಳಿಕ ಅಲ್ಲಿಯೇ ವೇದಿಕೆ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಂಘ ನೋಂದಣಿ:ನಾಡಪ್ರಭು ಕೆಂಪೇಗೌಡರ ಹೊಸಕೋಟೆ ಸಂಘದ ಹೆಸರಿನಲ್ಲಿ ಸಮುದಾಯದವರ ಸಂಘ ನೋಂದಣಿ ಮಾಡಲಾಗಿದೆ. ಈ ಸಂಘದ ಮೂಲಕ ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಹೋಗಲಾಗುವುದು ಎಂದು ಮುಖಂಡರು ಸಭೆಯ ಗಮನಕ್ಕೆ ತಂದರು.