ರಿಪ್ಪನ್‌ಪೇಟೆ: ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಮಾರಿಜಾತ್ರೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಜಿಟಿಜಿಟಿ ಮಳೆಯ ನಡುವೆಯೂ ಸಾವಿರಾರು ಭಕ್ತರು ಸಂಭ್ರಮದಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದು, ಹಣ್ಣು ಕಾಯಿ ನೈವೇದ್ಯ ಅರ್ಪಿಸಿದರು. ಪೂಜಾ ಪರಿಕರ, ಹೂವು ಸಹಿತ ಮಕ್ಕಳ ಆಟಿಕೆ, ಮಹಿಳೆಯರ ಅಲಂಕಾರಿಕಾ ಸಾಮಗ್ರಿ, ಸಿಹಿ ತಿನಿಸುಗಳ ಮಳಿಗೆಗಳು ಮುಖ್ಯರಸ್ತೆಯ ಇಕ್ಕೆಲಗಳಲ್ಲಿದ್ದು ಜಾತ್ರೆಗೆ ಮೆರುಗು ನೀಡಿದವು. ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಆಗಮಿಸುತ್ತಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ದೂರದೂರಿನಿಂದ ಬರುತ್ತಿದ್ದ ಭಕ್ತರ ವಾಹನಗಳನ್ನು ತುಸು ದೂರದಲ್ಲಿಯೇ ನಿಲ್ಲಿಸಿ ಬರುವಂತೆ ಪೊಲೀಸರು ವ್ಯವಸ್ಥೆ ಮಾಡಿದ್ದರು.